ಒಂದು ತಿಂಗಳಲ್ಲಿ ಗತಿ ಕಾಣಿಸುತ್ತೇವೆ, ಧೈರ್ಯವಿದ್ದರೆ ಉಳಿಸಿ…

ಮುಂಬಯಿ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ಬಳಿಕ ಭೀತಿಯಿಂದಲೇ ಬದುಕುತ್ತಿರುವ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಮತ್ತೊಂದು ಬೆದರಿಕೆ ಕರೆ ಬಂದಿದೆ. ಮುಂಬಯಿಯ ಟ್ರಾಫಿಕ್‌ ಕಂಟ್ರೋಲ್‌ ರೂಮ್‌ಗೆ ಗುರುವಾರ ಮಧ್ಯರಾತ್ರಿ ಕರೆ ಬಂದಿದ್ದು, ಜೈಲಿನಲ್ಲಿರುವ ಲಾರೆನ್ಸ್‌ ಬಿಷ್ಣೋಯ್‌ ಮತ್ತು ಸಲ್ಮಾನ್‌ ಖಾನ್‌ ಹೆಸರು ಸೇರಿಸಿ ಹಾಡು ಬರೆದ ಹಿಂದಿ ಸಿನೇಮಾಗಳ ಗೀತ ರಚನೆಕಾರನಿಗೆ ಒಂದು ತಿಂಗಳಲ್ಲಿ ಒಂದು ಗತಿ ಕಾಣಿಸುತ್ತೇವೆ ಎಂದು ಬೆದರಿಕೆಯೊಡ್ಡಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಹಾಡು ಬರೆದಾತ ಇನ್ನೆಂದೂ ಜೀವನದಲ್ಲಿ ಹಾಡು ಬರೆಯದಂತೆ ಮಾಡುತ್ತೇವೆ. ಸಲ್ಮಾನ್‌ ಖಾನ್‌ಗೆ ಧೈರ್ಯವಿದ್ದರೆ ಆ ಗೀತ ರಚನೆಕಾರನನ್ನು ಉಳಿಸಲಿ ಎಂದು ನಟನಿಗೆ ನೇರವಾಗಿ ಸವಾಲೊಡ್ಡಲಾಗಿದೆ.
ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್‌ ಖಾನ್‌ಗೆ ಪದೇಪದೆ ಬೆದರಿಕೆ ಕರೆಗಳು ಬರುತ್ತಿವೆ. ನಿನ್ನೆ ಬಾಲಿವುಡ್‌ನ ಇನ್ನೋರ್ವ ಜನಪ್ರಿಯ ನಟ ಶಾರೂಕ್‌ ಖಾನ್‌ಗೂ ಬೆದರಿಕೆ ಕರೆಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಓರ್ವ ವ್ಯಕ್ತಿಯನ್ನು ಪೊಲೀಸರು ಹಾವೇರಿಯಲ್ಲಿ ಬಂಧಿಸಿ ಮುಂಬಯಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ನಟನಿಗೆ ಬರುತ್ತಿರುವ ಬಹುತೇಕ ಕರೆಗಳನ್ನು ಹಣಕ್ಕಾಗಿ ಬೇರೆಯವರು ಮಾಡುವುದು ಸಾಬೀತಾಗಿದ್ದರೂ ಬಿಷ್ಣೋಯ್‌ ಗ್ಯಾಂಗಿನಿಂದ ನಿರಂತರ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲ ಕರೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕಾಗುತ್ತದೆ. ಸಲ್ಮಾನ್‌ಗೆ ಈಗಾಗಲೇ ಬಿಗು ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಲ್ಮಾನ್‌ ಖಾಸಗಿ ಅಂಗರಕ್ಷಕರನ್ನೂ ಇಟ್ಟುಕೊಂಡಿದ್ದಾರೆ.











































error: Content is protected !!
Scroll to Top