ವಕ್ಫ್‌ ವಿವಾದ – ಕಾರ್ಕಳದಲ್ಲಿ ಬಿಜೆಪಿ ಪ್ರತಿಭಟನೆ

ಕಾರ್ಕಳ : ಉತ್ತರ ಕರ್ನಾಟಕದ ಕೆಲವೊಂದು ಭಾಗಗಳಲ್ಲಿ ಹಳ್ಳಿಯ ರೈತರ ಜಮೀನು ವಕ್ಫ್‌ ಆಸ್ತಿಗೆ ನೋಂದಾವಣಿಯಾಗಿದ್ದು, ಇದರ ವಿರುದ್ಧ ನಾವೆಲ್ಲರೂ ರಸ್ತೆಗಿಳಿದು ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಇದೀಗ ಉತ್ತರ ಕರ್ನಾಟಕದಲ್ಲಿ ರೈತರ ಜಮೀನು, ಮಠ ಮಂದಿರದ ಸ್ಥಳಗಳು ವಕ್ಫ್‌ ಬೋರ್ಡ್‌ಗೆ ನೋಂದಾಣಿಯಾಗಿದೆ ಎಂಬ ವಿಚಾರವನ್ನು ನಾವು ನೋಡುತ್ತಿದ್ದೇವೆ. ನಾಳೆ ನಾಡಿದ್ದು ನಮ್ಮ ಜಿಲ್ಲೆ, ನಮ್ಮ ತಾಲೂಕಿನಲ್ಲೂ ಈ ಬೆಳವಣಿಗೆ ನಡೆಯಬಹುದು ಎಂದು ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್‌ ನಾಯಕ್‌ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ರೈತರ ಜಮೀನಿಗೆ ವಕ್ಫ್‌ ಬೋರ್ಡ್‌ ನೋಟಿಸ್‌ ನೀಡಿರುವುದರ ವಿರುದ್ಧ ನ. 5ರಂದು ಕಾರ್ಕಳ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ನಿರಂತರವಾಗಿ ಹಿಂದುಗಳಿಗೆ ದ್ರೋಹ
ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರಕಾರ ನಿರಂತರವಾಗಿ ಹಿಂದುಳಿಗೆ ದ್ರೋಹ ಮಾಡುತ್ತಿದೆ. ಕಾಂಗ್ರೆಸ್‌ ಆಡಳಿತದಲ್ಲಿರುವಾಗ ಪ್ರತಿ ದೀಪಾವಳಿ ಸಂದರ್ಭ ಜನರಿಗೆ ತೊಂದರೆ ಕೊಡುತ್ತಿದ್ದು, 2013-14ರ ಸಂದರ್ಭದಲ್ಲಿ ಕಾಂಗ್ರೆಸ್‌ ಸರಕಾರ ನ.10ರಂದು ಟಿಪ್ಪು ಜಯಂತಿ ಆಚರಣೆಯನ್ನು ಘೋಷಣೆ ಮಾಡಿತು. ಆ ಸಂದರ್ಭವೂ ನಾವು ಪ್ರತಿಭಟನೆ ಮಾಡಿದ್ದೆವು. ಈ ಬಾರಿ ದೀಪಾವಳಿಯ ಸಂದರ್ಭ ಲ್ಯಾಂಡ್‌ ಮಾಫಿಯಾದ ಮೂಲಕ ತೊಂದರೆ ಕೊಡುತ್ತಿದೆ ಎಂದು ನವೀನ್‌ ನಾಯಕ್‌ ಹೇಳಿದ್ದಾರೆ.

ಮುಸ್ಲಿಂ ಚಿತ್ರೀಕರಣದ ಅಂಗವಾಗಿ ಲ್ಯಾಂಡ್‌ ಮಾಫಿಯಾ ಹೆಸರಿನಲ್ಲಿ ಯಾವುದೋ ಹಿಂದಿನ ಕಾನೂನನ್ನು ಜಾರಿ ಮಾಡಿ ಜನರಿಗೆ ಗೊತ್ತಿಲ್ಲದಂತೆಯೇ ರಾತ್ರಿ ಬೆಳಗಾಗುವಷ್ಟರಲ್ಲಿ ಅವರ ಜಾಗವನ್ನು ವಕ್ಫ್‌ ಬೋರ್ಡ್‌ಗೆ ದಾಖಲು ಮಾಡಲಾಗುತ್ತಿದೆ. ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ವಕ್ಫ್‌ ಬೋರ್ಡ್‌ ಸಮಿತಿಯನ್ನು ಮಾಡಲಾಗಿತ್ತು. ಆ ಸಂದರ್ಭ ಇಡೀ ರಾಜ್ಯದಲ್ಲಿ ವಕ್ಫ್‌ ಬೋರ್ಡ್‌ನ ಆಸ್ತಿ ಹಿರಿಯ ಕಾಂಗ್ರೆಸಿಗರು, ಮುಸಲ್ಮಾನರ ಹೆಸರಿನಲ್ಲಿದ್ದು, ಇದನ್ನು ವಕ್ಫ್‌ ಬೋರ್ಡ್‌ಗೆ ನೋಂದಾವಣೆ ಮಾಡಿಸುವಂತೆ ಹೇಳಲಾಗಿತ್ತು. ಆದರೆ ಇಂದು ಇಂತಹ ವಿಚಾರಗಳಿಗೆ ಗಮನ ಕೊಡದೆ ಸಾರ್ವಜನಿಕರ ಆಸ್ತಿಯನ್ನು ವಕ್ಫ್‌ ಬೋರ್ಡ್‌ಗೆ ನೋಂದಾಯಿಸುತ್ತಿದ್ದಾರೆ ಎಂದು ನವೀನ್‌ ನಾಯಕ್‌ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಸರಕಾರದ ಚೇಳಗಳಾಗಿ ವರ್ತಿಸಬೇಡಿ
ಯಾವುದೋ ಒಂದು ದರ್ಗಾಕ್ಕೆ ಕೇವಲ ಐದೋ, ಹತ್ತೋ ಸೆಂಟ್ಸ್‌ ಜಾಗವಿದೆ. ಆದರೆ, ಆ ಸರ್ವೇ ನಂಬರಿನಲ್ಲಿ ಎಷ್ಟು ಎಕರೆ ಜಾಗವಿದೆ ಆ ಎಲ್ಲಾ ಜಾಗವನ್ನು ವಕ್ಫ್‌ ಬೋರ್ಡ್‌ಗೆ ಸೇರಿಸುವಂತೆ ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ಮೌಖಿಕ ಸೂಚನೆ ನೀಡಿದ್ದಾರೆ. ಇನ್ನು ಸಚಿವ ಜಮೀರ್‌ ಅಹಮದ್‌ ಎಲ್ಲಾ ಜಿಲ್ಲೆಗಳಿಗೆ ಹೋಗಿ ಅದಾಲತ್‌ ಮಾಡಬೇಕೆಂದು ಬೆದರಿಸಿ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳ ಮೂಲಕ ಆಸ್ತಿಗಳನ್ನು ವಕ್ಫ್‌ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಬೇಕಾದ ಅಧಿಕಾರಿಗಳನ್ನು ನೇಮಿಸುತ್ತಿದ್ದಾರೆ ಎಂದ ಅವರು ಅಧಿಕಾರ ಮತ್ತು ಸರಕಾರ ಯಾವತ್ತೂ ಒಂದೇ ರೀತಿ ಇರುವುದಿಲ್ಲ ಆದ್ದರಿಂದ ನೀವು ಸಾರ್ವಜನಿಕರ ಹಿತಾಸಕ್ತಿಗಳನ್ನು ಬದಿಗೊತ್ತಿ ಕಾಂಗ್ರೆಸ್‌ ಸರಕಾರದ ಚೇಳಗಳಾಗಿ ವರ್ತಿಸಬೇಡಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ವಕ್ಫ್‌ ಆಸ್ತಿ ಮಾರಾಟ ಮಾಡುವ ಮೂಲಕ ಕಾಂಗ್ರೆಸ್‌ನಿಂದ ಚುನಾವಣೆಗೆ ಖರ್ಚು- ಉದಯ ಕುಮಾರ್
ಬಿಜೆಪಿ ವಿಭಾಗ ಪ್ರಭಾರಿ ಉದಯ್‌ ಕುಮಾರ್‌ ಶೆಟ್ಟಿ ಮಾತನಾಡಿ, ವಕ್ಫ್‌ ದೆಸೆಯಿಂದಾಗಿ ಇನ್ನು ಮುಂದೆ ದೀಪಾವಳಿಗೆ ಭೂಮಿ ಪೂಜೆ ನಡೆಸುವ ಸಂದರ್ಭ ಬಲೀಂದ್ರನ ಬದಲು ಇನ್ಯಾರನ್ನೋ ಕರೆಯುವ ಪರಿಸ್ಥಿತಿ ಬರಬಹುದು. ವಕ್ಫ್ ಕಾಯ್ದೆಯಲ್ಲಿ ಬದಲಾವಣೆ ಮಾಡುವ ಸಲುವಾಗಿ ಜಂಟಿ ಪಾರ್ಲಿಮೆಂಟ್ ಕಮಿಟಿಯನ್ನು ಕೇಂದ್ರ ಸರಕಾರ ರಚನೆ ಮಾಡಿತ್ತು. ಇದರ ದಾರಿ ತಪ್ಪಿಸುವ ಸಲುವಾಗಿ ಜಮೀರ್ ಅಹ್ಮದ್‌ರವರೊಂದಿಗೆ ಸೇರಿ ಸಿದ್ದರಾಮಯ್ಯನವರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ನಿಗಮ ಹಗರಣದ ಮೂಲಕ ಕಾಂಗ್ರೆಸ್ ಬಳ್ಳಾರಿಯಲ್ಲಿ ಚುನಾವಣೆಗೆ ಹಣ ಖರ್ಚು ಮಾಡಿರುವಂತೆ ವಕ್ಪ್ ಆಸ್ತಿ ಮಾರಾಟ ಮಾಡುವ ಮೂಲಕವೂ ಚುನಾವಣೆಗೆ ಹಣ ಖರ್ಚು ಮಾಡುತ್ತಿದ್ದರು. ವಕ್ಪ್‌ ಹೆಸರಿನ ಮೂಲಕ ರಾಜ್ಯದ ಸಾರ್ವಜನಿಕ ಆಸ್ತಿಯನ್ನು ಒಳಹಾಕುತ್ತಿರುವ ಸರಕಾರ ವಿಧಾನ ಸೌಧವೂ ವಕ್ಫ್ ಆಸ್ತಿ ಎಂದು ಹೇಳುತ್ತಿದೆ. ರಾಜ್ಯದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ರಾಜ್ಯದ ಹಿತ ಕಾಯಬೇಕಾದ ಮುಖ್ಯಮಂತ್ರಿಯವರು ಹಿಂಬಾಗಿಲಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಉದಯ್‌ ಕುಮಾರ್‌ ಶೆಟ್ಟಿ ಹೇಳಿದರು.

ಕಾಂಗ್ರೆಸ್‌ಗೆ ಭ್ರಷ್ಟಾಚಾರ ಹೊಸದೇನಲ್ಲ. ರಾಜ್ಯದ ಮುಖ್ಯಮಂತ್ರಿಯವರೂ ನುಂಗಣ್ಣನವರು. ಮುಡಾ ಹಗರಣದಲ್ಲಿ 62 ಕೋಟಿ ಬೆಲೆಬಾಳುವ ಜಾಗದ ದುಡ್ಡು ಕೊಟ್ಟರೆ ಹಿಂದೆ ಕೊಡುತ್ತೇನೆ ಎಂದವರು ಈಗ ಯಾಕೆ ಧರ್ಮಕ್ಕೆ ವಾಪಾಸ್ಸು ನೀಡಿದರು ಎಂದು ಪ್ರಶ್ನಿಸಿರುವ ಉದಯ್‌ ಕುಮಾರ್‌ ಶೆಟ್ಟಿ ವಕ್ಫ್‌ನ ಎಲ್ಲಾ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮ ಧ್ವನಿಗೆ ಜಮೀರ್‌ ಅಹ್ಮದ್‌ ಪಾಕಿಸ್ತಾನಕ್ಕೆ ಓಡಬೇಕು – ಸುನಿಲ್ ಕೆ. ಆರ್‌.
ಬಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ. ಆರ್. ಮಾತನಾಡಿ ವಕ್ಫ್‌ ಹೆಸರಿನಲ್ಲಿ ಹಿಂದುಗಳ ಆಸ್ತಿಯನ್ನು ಸಂಪೂರ್ಣವಾಗಿ ಕಬಳಿಸಬೇಕೆಂದಿರುವ ಜಮೀರ್‌ ಅಹ್ಮದ್‌ ನಮ್ಮ ಧ್ವನಿಯನ್ನು ಕೇಳಿ ಪಾಕಿಸ್ತಾನಕ್ಕೆ ಓಡಬೇಕು ಎಂದ ಅವರು ಜಮೀರ್‌ ಅಹ್ಮದ್‌ ವಿರುದ್ಧ ಘೋಷಣೆ ಕೂಗಿದರು.

ಜಮೀರ್‌ ಅಹ್ಮದ್‌ ರಾಜ್ಯದ ಎಲ್ಲಾ ಭಾಗಗಳಲ್ಲಿ ಸಂಚರಿಸಿ ಅಲ್ಲಿರುವ ಆಸ್ತಿಗಳನ್ನು ವಕ್ಫ್‌ ಬೋರ್ಡ್‌ಗೆ ನೋಂದಾಯಿಸುತಿದ್ದಾರೆ. ಆದರೆ, ವಕ್ಫ್‌ ಬೋರ್ಡ್‌ ಹೆಸರಿನಲ್ಲಿ ಮದರಸ, ಮಸೀದಿಗಳನ್ನು ನಿರ್ಮಾಣ ಮಾಡುತ್ತಾ ಅಲ್ಲಿ ಭಯೋತ್ಪಾದಕ ಫ್ಯಾಕ್ಟರಿ ವ್ಯವಸ್ಥೆಯಿರುವ ಜಾಗ ನಿರ್ಮಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸುನಿಲ್‌ ಕೆ. ಆರ್‌. ಮೊದಲು ಲವ್‌ ಜಿಹಾದ್‌ ಇತ್ತು ಈಗ ಅದರ ಮುಂದುವರಿದ ಭಾಗವಾಗಿ ಲ್ಯಾಂಡ್‌ ಜಿಹಾದ್‌ ನಡೆಯುತ್ತಿದೆ. ಮಠ ಮಂದಿರ, ದೇವಸ್ಥಾನದ ಆಸ್ತಿ ಅಥವಾ ಸಾರ್ವಜನಿಕ ಆಸ್ತಿಯನ್ನು ವಕ್ಫ್‌ ಬೋರ್ಡ್‌ ಹೆಸರಿಗೆ ನೋಂದಾಯಿಸಿ ಅದನ್ನು ಮುಸ್ಲಿಂರಿಗೆ ನೀಡಿ ಅಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಾ ದೇಶವನ್ನು ಕಬಳಿಸುವ ಹುನ್ನಾರಕ್ಕೆ ಕಾಂಗ್ರೆಸ್‌ ಸರಕಾರ ಸಹಕರಿಸುತ್ತಿದೆ. ಆದ್ದರಿಂದ ಕೇವಲ ರಾಜಕೀಯ ವ್ಯವಸ್ಥೆ ಮಾತ್ರವಲ್ಲ ಸಮಸ್ತ ಹಿಂದೂ ಸಮಾಜ ಒಟ್ಟಾಗಿ ಇದರ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.

ತಹಶೀಲ್ದಾರರಿಗೆ ಮನವಿ
ಬಂಡಿಮಠ ಬಸ್‌ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ನಡೆದ ಮೆರವಣಿಗೆಯ ಬಳಿಕ ವಕ್ಫ್‌ನಲ್ಲಾಗಿರುವ ದಾಖಲೆಗಳ ತಿದ್ದುಪಡಿ ವ್ಯವಹಾರಗಳ ಕುರಿತು ಸಿಬಿಐ ಮತ್ತು ಇ.ಡಿ. ತನಿಖೆ ನಡೆಸಲು ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ನಿಕಟ ಪೂರ್ವಾಧ್ಯಕ್ಷ ಬಿ. ಮಣಿರಾಜ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ ಮತ್ತು ಜಯರಾಮ ಸಾಲ್ಯಾನ್‌, ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಕಾರ್ಯದರ್ಶಿ ಉದಯ ಎಸ್‌. ಕೋಟ್ಯಾನ್‌, ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್‌ ಪೂಜಾರಿ ಬೋಳ, ಕಾರ್ಕಳ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ವಿನಯ ಡಿ. ಬಂಗೇರ, ಪಕ್ಷದ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.



























































































































error: Content is protected !!
Scroll to Top