ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಕಾರ್ಕಳ ತಾಲೂಕು ಕೇಂದ್ರ ಒಕ್ಕೂಟದ ಪದಗ್ರಹಣ ಸಮಾರಂಭ
ಕಾರ್ಕಳ: ಧರ್ಮಸ್ಥಳ ಸ್ವಸಹಾಯ ಸಂಘಗಳಿಗೆ ಸೇರಿದ ಬಳಿಕ ಯಾರೂ ಕಲ್ಪಿಸಲು ಕೂಡ ಸಾಧ್ಯವಾಗದ ರೀತಿಯಲ್ಲಿ ಉಳಿತಾಯ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸಿ ಉತ್ತಮ ಬದುಕು ನಡೆಸುತ್ತಿದ್ದಾರೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಸ್ವಸಹಾಯ ಯೋಜನೆ ಪರಿಪೂರ್ಣ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.
ಕಾರ್ಕಳದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಕಾರ್ಕಳ ತಾಲೂಕು ಕೇಂದ್ರ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ಜನಜಾಗೃತಿ ಅಧ್ಯಕ್ಷ ಉದಯಕುಮಾರ್ ಹೆಗ್ಡೆ ಮಾತನಾಡಿ ಒಬ್ಬ ಮನುಷ್ಯ ಜೀವನದ ಪೂರ್ತಿ ಕರ್ಮಗಳನ್ನು ಮುಗಿಸುವಲ್ಲಿಯವರೆಗೆ ಸಹಕಾರವನ್ನು ನೀಡುವ ಸಂಸ್ಥೆ ಗ್ರಾಮಾಭಿವೃದ್ಧಿ ಯೋಜನೆ ಮಾತ್ರ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಕರಾವಳಿ ಪ್ರಾದೇಶಿಕ ವ್ಯಾಪ್ತಿಯ ನಿರ್ದೇಶಕ ದುಗ್ಗೇಗೌಡ, ಒಕ್ಕೂಟದ ಅಧ್ಯಕ್ಷರು ಜನರಿಗೆ ಸೇವೆಯನ್ನು ಕೊಡಲು ಬಂದವರು, ನಾವು ಸದಸ್ಯರಿಗೆ ಯೋಜನೆಯ ಸವಲತ್ತುಗಳನ್ನು ಒದಗಿಸಿಕೊಟ್ಟಲ್ಲಿ ಆ ಸೇವೆ ಭಗವಂತನಿಗೆ ಸಲ್ಲುತ್ತದೆ. ಧರ್ಮಸ್ಥಳದಿಂದ ಆರಂಭವಾದ ದಾನ-ಧರ್ಮ ಇಂದು ಇಡೀ ವಿಶ್ವಕ್ಕೆ ವ್ಯಾಪಿಸಿದೆ ಎಂದು ಹೇಳಿದರು.
ಕೇಂದ್ರ ಸಮಿತಿ ಅಧ್ಯಕ್ಷ ಪ್ರವೀಣ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನನ್ನ ಜೀವನಕ್ಕೆ ಧರ್ಮಸ್ಥಳ ಯೋಜನೆ ಮಹತ್ತರ ಬೆಳಕನ್ನು ನೀಡಿದೆ. ಇದರಿಂದ ನನ್ನ ಜೀವನ ಬಂಗಾರವಾಯಿತು. ಯೋಜನೆಯ ಸಹಕಾರವನ್ನು ನನ್ನ ಜೇವನದ ಕೊನೆಯವರೆಗೂ ಸ್ಮರಿಸುತ್ತೇನೆ ಎಂದರು.
ನೂತನ ಕೇಂದ್ರ ಸಮಿತಿ ಅಧ್ಯಕ್ಷ ಮಂಜುನಾಥ್ ಬೈಲೂರು, ಜನಜಾಗೃತಿ ಸದಸ್ಯರಾದ ಹರಿಶ್ಚಂದ್ರ ತೆಂಡೂಲ್ಕರ್ ಹಾಗೂ ಕಮಲಾಕ್ಷ ನಾಯಕ್, ಭಜನಾ ಪರಿಷತ್ತಿನ ಅಧ್ಯಕ್ಷ ಹರೀಶ್ ಹೆಗ್ಡೆ ಮತ್ತು ಶೌರ್ಯ ಘಟಕದ ಮಾಸ್ಟರ್ ಸದಾನಂದ ಸಾಲಿಯಾನ್ ಶುಭ ಹಾರೈಸಿದರು.

ಧರ್ಮಾಧಿಕಾರಿಯವರು ಧರ್ಮಸ್ಥಳ ಯೋಜನೆಯಿಂದ ಮಂಜೂರು ಮಾಡಿದ ಅನುದಾನಗಳು, ವೀಲ್‌ಚೇರ್ ಮತ್ತು ಮರಣ ಹೊಂದಿದ ಸದಸ್ಯರ ಹಾಗೂ ಫಲಾನುಭವಿಗಳ ಪ್ರಗತಿ ರಕ್ಷಾ ಕವಚದ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.
ಏಳು ವಲಯಗಳ ಅಧ್ಯಕ್ಷರು ಹಾಗೂ ನಿಕಟಪೂರ್ವ ವಲಯಾಧ್ಯಕ್ಷರು, ತಾಲೂಕಿನ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಯೋಜನೆಯ ಕಾರ್ಯಕರ್ತರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಹೇಮಲತಾ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಹೊಸ್ಮಾರು ವಲಯದ ಮೇಲ್ವಿಚಾರಕ ಮನೋಜ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ವಲಯದ ಮೇಲ್ವಿಚಾರಕಿ ಗೀತಾ ವಂದಿಸಿದರು.















































