ಮಾದಕ ವಸ್ತು ಪೂರೈಕೆ – ಕಾರ್ಕಳದಲ್ಲಿ ಬೀಳಲಿ ಕಡಿವಾಣ

ರಾಜ್ಯಾದ್ಯಂತ ಸಂಚಲವನ್ನುಂಟು ಮಾಡಿದ ಕಾರ್ಕಳದ ಗ್ಯಾಂಗ್‌ ರೇಪ್‌ ಕೇಸಿನಲ್ಲಿ ಪ್ರಮುಖವಾಗಿ ವ್ಯಕ್ತವಾದ ಅಂಶ ಆರೋಪಿಗಳು ಯುವತಿಗೆ ಬಿಯರ್‌ನಲ್ಲಿ ಮಾದಕ ವಸ್ತು ಬೆರೆಸಿ ಕುಡಿಸಿದ್ದರು ಎನ್ನುವುದು. ಆಕೆ ಮಾದಕ ವಸ್ತುವಿನ ಅಮಲಿನಲ್ಲಿ ಅರೆ ಪ್ರಜ್ಞಾವಸ್ಥೆಗೆ ಜಾರಿದಾಗ ಕೃತ್ಯ ಎಸಗಲಾಗಿದೆ ಎನ್ನುವುದು ವ್ಯಾಪಕವಾಗಿ ಚರ್ಚೆಯಾದ ವಿಷಯ. ಹಾಗೆಂದು ಮಾದಕ ವಸ್ತು ನೀಡಿ ಅತ್ಯಾಚಾರ ಎಸಗುವ ಸುದ್ದಿ ಹೊಸದೇನೂ ಅಲ್ಲ. ಡ್ರಗ್‌ ನೀಡಿ ಅತ್ಯಾಚಾರ ಎಸಗಿದ ಸಾವಿರಾರು ಕೃತ್ಯಗಳು ಈ ಹಿಂದೆಯೂ ಸಂಭವಿಸಿವೆ. ಆಘಾತ ಉಂಟು ಮಾಡಿದ್ದು ಸುಸಂಸ್ಕೃತ ಊರು ಎನಿಸಿಕೊಂಡಿರುವ ಕಾರ್ಕಳದಂಥ ಸಣ್ಣ ಪೇಟೆಯಲ್ಲೂ ಮಾದಕ ವಸ್ತು ಇಷ್ಟು ಸುಲಭವಾಗಿ ಸಿಗುತ್ತಿದೆ ಎಂಬ ವಿಚಾರ.

ಕಳೆದ ಕೆಲವು ಸಮಯದಿಂದ ಕಾರ್ಕಳದ ಸುತ್ತಮುತ್ತ ಗಾಂಜಾದಂಥ ಮಾದಕ ವಸ್ತು ವಶಪಡಿಸಿಕೊಳ್ಳುವ ಪ್ರಕರಣಗಳು ಪದೇಪದೆ ಸಂಭವಿಸುತ್ತಿವೆ. ಕಾಲೇಜೊಂದರ ಕ್ಯಾಂಪಸ್‌ ಬಳಿಗೆ ಮಾದಕ ವಸ್ತು ಪ್ರವೇಶವಾಗಿದೆ ಎಂಬ ಗುಮಾನಿ ಹಿಂದಿನಿಂದಲೂ ಇದೆ. ಇದನ್ನು ಸಾಬೀತುಪಡಿಸುವ ಕೆಲವು ಪ್ರಕರಣಗಳು ಕೂಡ ವರದಿಯಾಗಿವೆ. ಇದು ನಿಜವಾಗಿ ಕಳವಳಕಾರಿಯಾದ ವಿಷಯ.

ಯುವಕ-ಯುವತಿಯರನ್ನು ಗುರಿ ಮಾಡಿಕೊಂಡು ಮಾದಕ ವಸ್ತು ಪೂರೈಸುವ ವ್ಯವಸ್ಥಿತ ಜಾಲವಿದೆ. ಯುವಕ-ಯುವತಿಯರು ಸುಲಭವಾಗಿ ಸಿಗುವುದು ಶಾಲಾ-ಕಾಲೇಜುಗಳಲ್ಲಿ. ಮಂಗಳೂರಿನಂಥ ನಗರಗಳಲ್ಲಿ ಕಾಲೇಜು ಯುವಕರು ಮಾದಕ ವಸ್ತುವಿನ ದಾಸರಾಗಿ ಜೀವನವನ್ನು ಹಾಳು ಮಾಡಿಕೊಂಡಿರುವ ಅನೇಕ ನಿದರ್ಶನಗಳು ಇವೆ.

ದೇಶದ ಯುವ ಜನತೆಯ ಸಾಮರ್ಥ್ಯವನ್ನು ನಾಶ ಮಾಡಬೇಕಾದರೆ ಅವರಿಗೆ ಮಾದಕ ವಸ್ತುವಿನ ಚಟ ಹತ್ತಿಸಿದರೆ ಸಾಕು ಎನ್ನುತ್ತಾರೆ. ಕಳೆದ ಅನೇಕ ವರ್ಷಗಳಿಂದ ಯುವ ಜನತೆಯನ್ನು ಕೇಂದ್ರೀಕರಿಸಿ ದೇಶದಲ್ಲಿ ನಡೆಯುತ್ತಿರುವ ಮಾದಕ ವಸ್ತು ದಂಧೆ ಈ ಮಾತನ್ನು ನಿಜಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಮಾಡಿರುವ ಪಿತೂರಿಯಂತೆ ಕಾಣಿಸುತ್ತದೆ. ಚಿತ್ರರಂಗದವರು, ಕಾರ್ಪೋರೇಟ್‌ ಕಂಪನಿಗಳ ಯುವ ಉದ್ಯೋಗಿಗಳಂಥ ವಿದ್ಯಾವಂತರೇ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗಿರುವುದನ್ನು ನೋಡುವಾಗ ನಿಜಕ್ಕೂ ಆತಂಕವಾಗುತ್ತದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಮಾದಕ ವಸ್ತುಗಳ ಹಾವಳಿ ಮಿತಿಮೀರಿದೆ. ಈಗ ಹಳ್ಳಿಗಳಲ್ಲೂ ಮಾದಕ ವಸ್ತು ಯಾವುದೇ ಅಡೆತಡೆ ಇಲ್ಲದೆ ಸಿಗುತ್ತಿದೆ ಎನ್ನುವುದಕ್ಕೆ ಕಾರ್ಕಳ ಠಾಣೆಯಲ್ಲಿ ಇತ್ತೀಚೆಗಿನ ಕೆಲವು ತಿಂಗಳಲ್ಲಿ ದಾಖಲಾಗಿರುವ ಪ್ರಕರಣಗಳೇ ಸಾಕ್ಷಿ. ಮಾದಕ ಪದಾರ್ಥಗಳಿಗೆ ದೊಡ್ಡ ಗಿರಾಕಿಗಳಾಗಿದ್ದಾರೆ. ಕೆಲವೊಂದು ಅಂಗಡಿ ಮುಂಗಟ್ಟುಗಳಲ್ಲಿ ಗಾಂಜಾ ಎಲೆಗಳು, ಮತ್ತು ಬರಿಸುವ ಚಾಕೋಲೆಟ್‌, ಕೇಕ್‌, ಸಿಗರೇಟ್‌ ಮೊದಲಾದವುಗಳು ಧಾರಾಳವಾಗಿ ಸಿಗುತ್ತಿವೆ. ಇದೆಲ್ಲವೂ ಹೇಗೆ ಸಿಗುತ್ತದೆ ? ಪೂರೈಕೆದಾರರು ಯಾರು ಎನ್ನುವುದೇನು ಚಿದಂಬರ ರಹಸ್ಯವಲ್ಲ. ಡ್ರಗ್ಸ್‌ ಪೂರೈಸುವ ಜಾಲಗಳು ತುಂಬ ಸಂಘಟಿತವಾಗಿ ಕಾರ್ಯ ನಿರ್ವಹಿಸುತ್ತಿವೆ. ಪೊಲೀಸರ ಕೈಗೆ ಸಿಕ್ಕಿಬೀಳುತ್ತಿರುವುದು ಈ ಜಾಲದ ಕೊನೆಯ ಕೊಂಡಿಗಳು ಮಾತ್ರ. ಇದರ ಸೂತ್ರಧಾರರು ಎಲ್ಲೋ ಕುಳಿತು ಇಡೀ ವ್ಯವಸ್ಥೆಯನ್ನು ನಿರ್ವಹಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಅನೇಕ ಯುವಕರಿಗೆ ಮಾದಕ ವಸ್ತು ದಂಧೆಯೇ ಬದುಕಿನ ದಾರಿಯಾಗಿದೆ ಎನ್ನುವುದು ಇನ್ನೊಂದು ಆತಂಕದ ಸಂಗತಿ. ಯಾವುದೇ ಶ್ರಮವಿಲ್ಲದೆ ದುಡ್ಡು ಸಿಗುವ ದಂಧೆಯಿದು. ತೋರಿಸಲು ಯಾವುದೇ ಉದ್ಯೋಗವಿಲ್ಲದ ಯುವಕರು ಲಕ್ಷಗಟ್ಟಲೆ ಬೆಲೆಬಾಳುವ ಕಾರು-ಬೈಕ್‌ಗಳಲ್ಲಿ ಓಡಾಡುವಾಗ ಅವರ ಆದಾಯದ ಮೂಲ ಯಾವುದು ಎಂದು ಆಶ್ಚರ್ಯಪಡುತ್ತೇವೆ. ಅವರು ಸಿಕ್ಕಿಬಿದ್ದಗಾಲೇ ರಹಸ್ಯ ಬಯಲಾಗುವುದು.

ಭಾರತಕ್ಕೆ ಪಾಕಿಸ್ಥಾನ, ಅಫಘಾನಿಸ್ಥಾನದಂಥ ದೇಶಗಳಿಂದ ಕಳ್ಳದಾರಿಯ ಮೂಲಕ ನಿರಂತರವಾಗಿ ಮಾದಕ ವಸ್ತುಗಳ ಪೂರೈಕೆ ಆಗುತ್ತಿರುತ್ತದೆ. ನಂತರ ಅದು ದೇಶದೆಲ್ಲೆಡೆ ವಿತರಣೆಯಾಗುತ್ತದೆ. ಮಾದಕ ವಸ್ತುಗಳ ಜಾಲದ ವ್ಯಾಪ್ತಿ ತುಂಬ ಜಟಿಲವಾಗಿದೆ. ಈ ಪಿಡುಗನ್ನು ಮೂಲದಿಂದಲೇ ನಿರ್ಮೂಲನೆ ಮಾಡಬೇಕು ಎಂಬುದರಲ್ಲಿ ಎರಡು ಮಾತೇ ಇಲ್ಲ. ಏಕೆಂದರೆ ಇದು ನಮ್ಮ ಯುವ ಶಕ್ತಿಯ ಚೇತನವನ್ನೇ ಉಡುಗಿಸುತ್ತದೆ; ಅವರ ಜೀವನದ ಉದ್ದೇಶ ಮತ್ತು ಗುರಿಗಳನ್ನು ಬುಡಮೇಲು ಮಾಡುತ್ತದೆ. ವೈಯಕ್ತಿಕ ವ್ಯಾಪ್ತಿಯನ್ನು ದಾಟಿ, ಕುಟುಂಬ, ಸಮುದಾಯ ಮತ್ತು ದೇಶಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ.

ಆದರೆ ಮಾದಕ ವಸ್ತುಗಳ ನಿಯಂತ್ರಣ ಕೇವಲ ಪೊಲೀಸರಿಂದ ಮಾತ್ರ ಆಗುವ ಕೆಲಸವಲ್ಲ. ಇದೊಂದು ಸಾಮಾಜಿಕ ಸಮಸ್ಯೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ತಂದೆ, ತಾಯಿ, ಕುಟುಂಬ, ಶಾಲೆ, ಕಾಲೇಜು, ಸಮಾಜ, ಎಲ್ಲರೂ ಇದರಲ್ಲಿ ಕೈ ಜೋಡಿಸಬೇಕು. ಆಗ ಮಾತ್ರ ಮಾದಕ ವಸ್ತು ಪಿಡುಗಿಗೆ ಕಡಿವಾಣ ಹಾಕಲು ಸಾಧ್ಯ.

















































































error: Content is protected !!
Scroll to Top