ಬೆಂಗಳೂರು : ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ಫೋಟೋ ವೈರಲ್ ಆಗಿರುವುದು ಸಾಕಷ್ಟು ಚರ್ಚೆಗೆ ಕಾರಣ ಹಿನ್ನೆಲೆಯಲ್ಲಿ ಇದೀಗ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ನಟ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಲವು ಆರೋಪಿಗಳನ್ನು ಬೇರೆ ಬೇರೇ ಜೈಲಿಗೆ ಸ್ಥಳಾಂತರಿಸುವಂತೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಅದರಂತೆ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ನ್ಯಾಯಾಲಯದ ಆದೇಶದ ಪ್ರತಿ ಸಿಗುತ್ತಿದ್ದಂತೆ ಜೈಲು ಸಿಬ್ಬಂದಿ ದರ್ಶನ್ ರನ್ನು ಸ್ಥಳಾಂತರಿಸಲಿದ್ದಾರೆ. ದರ್ಶನ್ ಶಿಫ್ಟ್ ಆಗಲಿರುವ ಬಳ್ಳಾರಿ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಇದೆ. ಹೀಗಾಗಿ ಮುಂದೆ ನ್ಯಾಯಾಲಯದ ವಿಚಾರಣೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಒಳಪಡಿಸಲಾಗುತ್ತದೆ ಎನ್ನಲಾಗುತ್ತಿದೆ.
ಕೊಲೆ ಕೇಸ್ನಲ್ಲಿ ಆರೋಪಿಗಳಾದ ಪವನ್, ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ, ಜಗದೀಶ್, ಲಕ್ಷ್ಮಣ ಶಿವಮೊಗ್ಗ ಜೈಲಿಗೆ, ಧನರಾಜ್ ಧಾರವಾಡ ಜೈಲಿಗೆ, ವಿನಯ್ ವಿಜಯಪುರ ಜೈಲಿಗೆ ಸ್ಥಳಾಂತರ ಆಗಲಿದೆ. ನಾಗರಾಜ್ ಕಲಬುರಗಿ ಜೈಲು, ಪ್ರದೂಶ್ ಬೆಳಗಾವಿ ಜೈಲಿಗೆ ಶಿಫ್ಟ್ ಆಗಲಿದ್ದಾರೆ. ಇನ್ನುಳಿದ ಆರೋಪಿಗಳಾದ ಪವಿತ್ರಾ ಗೌಡ, ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರದಲ್ಲೇ ಮುಂದುವರಿಯಲಿದ್ದಾರೆ. ರವಿ, ಕಾರ್ತಿಕ್, ನಿಕಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರನಲ್ಲ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಸ್ವಾತಂತ್ರ್ಯ ಹೋರಾಟಗಾರನಲ್ಲ. ಕೊಲೆ ಮಾಡಿ ಜೈಲು ಸೇರಿರುವ ಕ್ರಿಮಿನಲ್. ಆತನಿಗೆ ರಾಜೋಪಚಾರ ಮಾಡಬಾರದು ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದರು.

ಮತ್ಯಾರು ಸಿಗ್ತಾರೆ ?
ಜೈಲಿನಲ್ಲಿ ವಿಐಪಿ ಆರೋಪಿಗಳಿಗೆ ರಾಜಾತಿಥ್ಯ ಸಿಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೇ ಈ ಬಗ್ಗೆ ಆರೋಪಗಳು ಸಾಕಷ್ಟು ಬಂದಿದ್ದವು. ಈಗ ದರ್ಶನ್ ವಿಚಾರದಲ್ಲಿ ಮಾತ್ರ ಸುದ್ದಿಯಾಗುತ್ತಿದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಎಷ್ಟೋ ವರ್ಷಗಳಿಂದ ಜೈಲಿನಲ್ಲಿ ಈ ರೀತಿ ನಡೆಯುತ್ತಿದೆ. ದರ್ಶನ್ ಇರೋದರಿಂದ ಅವರದ್ದು ತಪ್ಪು ಎಂದು ಫೋಕಸ್ ಆಗುತ್ತಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಈ ಹಿಂದೆಯೇ ಇದರ ಬಗ್ಗೆ ಆಕ್ಷೇಪ ಎತ್ತಿದ್ದರು. ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದರು ಎಂದು ಸುಮಲತಾ ಹೇಳಿದರು.
ಕ್ರಿಮಿನಲ್ ಜೊತೆಗಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸುಮಲತಾ ಅವರು ದರ್ಶನ್ ಮತ್ತಿನ್ಯಾರ ಜೊತೆ ಮಾತಾಡ್ಬೇಕು. ಜೈಲಲ್ಲಿ ಕ್ರಿಮಿನಲ್ಸ್ ಅಲ್ಲದೆ ಮತ್ತ್ಯಾರು ಸಿಗ್ತಾರೆ ಹೇಳಿ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.































