ಕ್ಯಾಪಿಟೇಶನ್ ಶುಲ್ಕ ವಸೂಲು ಮಾಡಬಾರದೆಂದು ಶಿಕ್ಷಣ ಇಲಾಖೆ ಸುತ್ತೋಲೆ
ಬೆಂಗಳೂರು: 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗೆ ಚಾಲನೆ ಸಿಕ್ಕಿದ್ದು, ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವಾಗ ಶುಲ್ಕ ಏರಿಕೆ ನೋಡಿ ಕಂಗಾಲಾಗಿದ್ದಾರೆ. ಕೆಲವು ಖಾಸಗಿ ಶಾಲೆಗಳಲ್ಲಿ ಶೇ.30ರ ತನಕ ಶುಲ್ಕ ಹೆಚ್ಚಳವಾಗಿದ್ದು, ದಿನನಿತ್ಯದ ಖರ್ಚುಗಳ ಜೊತೆ ಮಕ್ಕಳ ಶಾಲಾ ಶುಲ್ಕ ಪೋಷಕರ ಜೀಬಿಗೆ ಕತ್ತರಿ ಹಾಕಿದೆ. ಶಾಲಾ ಶಿಕ್ಷಣ ಇಲಾಖೆ, ಆಯುಕ್ತರ ಕಚೇರಿ ಈ ವಿಷಯದಲ್ಲಿ ಶಾಲೆಗಳಿಗೆ ಖಡಕ್ ಸೂಚನೆಯನ್ನು ನೀಡಿದೆ.
ಶಿಕ್ಷಣ ಇಲಾಖೆ ಆಯುಕ್ತರು ಈ ಕುರಿತು ಸುತ್ತೋಲೆ ಹೊರಡಿಸಿ ಕ್ಯಾಪಿಟೇಶನ್ ಶುಲ್ಕ ವಸೂಲಿ ಮಾಡಬಾರದು ಎಂದು ಹೇಳಿದೆ. ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಾಗ ಮಕ್ಕಳಿಗಾಗಲಿ ಅವರ ಪೋಷಕರಿಗಾಗಲಿ ಯಾವುದೇ ಪರೀಕ್ಷೆಗಳನ್ನು ಇಡಬಾರದು. ಕ್ಯಾಪಿಟೇಶನ್ ಶುಲ್ಕ ವಸೂಲು ಮಾಡಿದರೆ ನಿಯಮಾನುಸಾರ ಶಾಲೆಗಳಿಗೆ ದಂಡ ಹಾಕಲಾಗುವುದು ಎಂದು ಎಚ್ಚರಿಸಿದೆ.
ಶಿಕ್ಷಣ ಹಕ್ಕು ಕಾಯ್ದೆ-2009ರ ಸೆಕ್ಷನ್-2(b) ರಂತೆ ಎಲ್ಲ ಖಾಸಗಿ ಶಾಲೆಗಳು ಶುಲ್ಕವನ್ನು ಶಾಲಾ ಜಾಲತಾಣದಲ್ಲಿ, ಶಾಲಾ ಸೂಚನಾ ಫಲಕದಲ್ಲಿ ಮತ್ತು ಇಲಾಖಾ ಜಾಲತಾಣದಲ್ಲಿ ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಪ್ರಕಟಪಡಿಸಲು ಹಾಗೂ ಶುಲ್ಕ ವಸೂಲಾತಿ ಮತ್ತು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಕ್ಷನ್-13ರ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಿದೆ.






























































