ಬಿಜೆಪಿಯಿಂದ 650 ಸಾರ್ವಜನಿಕ ಸಭೆ, 180 ರೋಡ್‌ಶೋ

ರಾಜ್ಯದಲ್ಲಿ ಪ್ರಚಾರದ ಮಾಹಿತಿ ನೀಡಿದ ವಿ.ಸುನಿಲ್ ಕುಮಾರ್

ಬೆಂಗಳೂರು: ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಜನರ ಪ್ರತಿಕ್ರಿಯೆ ಮತ್ತು ಮೂರು ಹಂತದ ಪ್ರಚಾರದ ಆಧಾರದ ಮೇಲೆ ಎಲ್ಲ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಯ ಸಂಯೋಜಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಉತ್ತಮವಾಗಿ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಲಾಭದಾಯಕವಾಗಿದೆ ಎಂದು ತಿಳಿಸಿದ್ದಾರೆ.
ಕಡಿಮೆ ಸಮಯದಲ್ಲಿ ಹೆಚ್ಚಿನ ಜನರನ್ನು ತಲುಪಲು ಪಕ್ಷ ಮಾಡಿದ ಪ್ರಯತ್ನ ಫಲ ನೀಡಿದೆ. ನಾವು ಮೂರು ರೀತಿಯಲ್ಲಿ ಮತದಾರರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೆವು. ದೊಡ್ಡ ಸಾರ್ವಜನಿಕ ಸಭೆಗಳು, ರೋಡ್‌ಶೋಗಳು ಮತ್ತು ಮನೆ-ಮನೆ ಪ್ರಚಾರದ ಮೂಲಕ ನಮ್ಮ ಸಂದೇಶವನ್ನು ರವಾನಿಸಿದ್ದೇವೆಂದು ವಿವರಿಸಿದ್ದಾರೆ.

79 ಸಾರ್ವಜನಿಕ ಸಭೆಗಳಲ್ಲಿ 14 ಬಿಜೆಪಿ ರಾಷ್ಟ್ರೀಯ ನಾಯಕರು ಭಾಗವಹಿಸಿದ್ದರು. 39 ಸ್ಥಳಗಳಲ್ಲಿ ರೋಡ್‌ಶೋಗಳು ನಡೆದಿವೆ. ಸುಮಾರು 30 ರಾಜ್ಯ ನಾಯಕರು 557 ಸಭೆಗಳನ್ನು ಉದ್ದೇಶಿಸಿ ಮತ್ತು 139 ಸ್ಥಳಗಳಲ್ಲಿ ರೋಡ್‌ಶೋಗಳನ್ನು ನಡೆಸಿದ್ದಾರೆ. 650ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳು ಮತ್ತು 180ಕ್ಕೂ ಹೆಚ್ಚು ರೋಡ್‌ಶೋಗಳನ್ನು ನಡೆಸಲಾಗಿದೆ.

ಎಲ್ಲಾ ಬೂತ್‌ಗಳಲ್ಲಿ 50-75 ಜನರನ್ನು ಒಳಗೊಂಡ 60,000ಕ್ಕೂ ಹೆಚ್ಚು ಸಣ್ಣ ಸಭೆಗಳನ್ನು ನಡೆಸಲಾಗಿದೆ. ಅಲ್ಲಿ ಕಾಂಗ್ರೆಸ್‌ನ ಅಪಪ್ರಚಾರ ಮತ್ತು ಚುನಾಯಿತರಾದರೆ ಎದುರಾಗುವ ಸಮಸ್ಯೆಗಳನ್ನು ವಿವರಿಸಲಾಗಿದೆ. ಪಕ್ಷವು ಚುನಾವಣಾ ಆಯೋಗಕ್ಕೆ 152 ದೂರುಗಳನ್ನು ಸಲ್ಲಿಸಿದೆ. ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ ಅವರ ನಡುವಿನ ಚತುಷ್ಕೋನ ಹೋರಾಟದಿಂದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.































































































































error: Content is protected !!
Scroll to Top