ನಗರಕ್ಕೆ ಎರಡು ದಿನಕ್ಕೊಮ್ಮೆ ನಳ್ಳಿನೀರು ಪೂರೈಕೆ
ಉಡುಪಿ: ಮಂಗಳೂರು ನಂತರ ಇದೀಗ ಉಡುಪಿಯಲ್ಲಿಯೂ ನೀರಿನ ರೇಷನಿಂಗ್ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ತೀವ್ರ ಬರದಿಂದ ಜಲಾಶಯಗಳು ಬರಿದಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ತುಂಬೆ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಇಳೆಕೆಯಾದ ಬಳಿಕ ಮಂಗಳುರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇಂದಿನಿಂದ ಉಡುಪಿಯಲ್ಲೂ ಇದೇ ಪದ್ಧತಿ ಜಾರಿಗೆ ಬರಲಿದೆ.
ಬುಧವಾರದಿಂದಲೇ ಪಡಿತರ ವ್ಯವಸ್ಥೆ ಜಾರಿಗೆ ಬರಲಿದ್ದು, ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟಹೆಚ್ಚುವವರೆಗೂ ಮುಂದುವರಿಯಲಿದೆ ಎಂದು ಉಡುಪಿ ನಗರ ಪಾಲಿಕೆಯ ಆಯುಕ್ತ ರಾಯಪ್ಪ ತಿಳಿಸಿದ್ದಾರೆ.
ಉಡುಪಿ ನಗರಕ್ಕೆ ನೀರು ಪೂರೈಸುವ ಏಕೈಕ ಮೂಲ ಬಜೆಯಲ್ಲಿ ಸ್ವರ್ಣಾ ನದಿಗೆ ನಿರ್ಮಿಸಲಾದ ಅಣೆಕಟ್ಟೆ. ಇದರಲ್ಲಿ ಸದ್ಯ 3. 25 ಮೀಟರ್ ಮಾತ್ರ ನೀರಿನ ಸಂಗ್ರಹವಿದೆ. ಜಲಾಶಯ ಮತ್ತೆ ಸಂಪೂರ್ಣ ಭರ್ತಿಯಾಗುವವರೆಗೂ ನೀರಿನ ಪಡಿತರ ನಿರ್ಧಾರವನ್ನು ಆಗಾಗ್ಗೆ ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿ ಹೇಳಿದರು.































































