ಅಭ್ಯರ್ಥಿ ಆಯ್ಕೆಯಲ್ಲಿ ಕಾಂಗ್ರೆಸ್ ಜಾಣತನ ತೋರಿಸಿದ ಕಾರಣ ಸ್ಪರ್ಧೆ ಕಠಿಣ
ಕಾರ್ಕಳ : ಕರಾವಳಿ ಬಿಜೆಪಿಯ ಭದ್ರಕೋಟೆ ಎನ್ನುತ್ತಿದ್ದರೂ ಈ ಸಲ ಇಲ್ಲೂ ಬಿಜೆಪಿ ಗೆಲುವಿಗೆ ಬಹಳ ತ್ರಾಸ ಪಡುತ್ತಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ ಜಾಣತನ ತೋರಿಸಿದ ಪರಿಣಾಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳು ಕೂಡ ಹೈವೋಲ್ಟೇಜ್ ಆಗಿ ಪರಿಣಮಿಸಿವೆ. ಎರಡೂ ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರವೂ ಜೋರಾಗಿ ನಡೆದಿದೆ. ಮೇಲ್ನೋಟಕ್ಕೆ ಬಿಲ್ಲವ ವರ್ಸಸ್ ಬಂಟ ಎಂಬಂತೆ ಕಂಡುಬರುತ್ತಿದ್ದರೂ ಜಾತಿ ಲೆಕ್ಕಾಚಾರ ಇದನ್ನು ಮೀರಿ ನಡೆಯುತ್ತಿದೆ.
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ನಿಂದ ಪದ್ಮರಾಜ್ ಮತ್ತು ಬಿಜೆಪಿಯಿಂದ ಬ್ರಿಜೇಶ್ ಚೌಟ ಹಾಗೂ ಉಡುಪಿ-ಚಿಕ್ಕಮಗಳೂರಿನಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ನಿಂದ ಜಯಪ್ರಕಾಶ್ ಹೆಗ್ಡೆಯವರು ಸ್ಪರ್ಧಿಸುತ್ತಿದ್ದಾರೆ.
2023ರ ವಿಧಾನಸಭಾ ಚುನಾವಣೆಯ ಫಲಿತಾಂಶ 2024ರ ಲೋಕಸಭೆ ಚುನಾವಣೆಗೆ ಮಾನದಂಡವಾದರೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಮಿಶ್ರ ಫಲಿತಾಂಶ ಸಿಗಲಿದೆ ಎನ್ನುವುದೊಂದು ಸರಳ ಲೆಕ್ಕಾಚಾರ.
ಎರಡೂ ಪಕ್ಷಗಳ ತಂತ್ರಜ್ಞರು 2023ರ ವಿಧಾನಸಭೆ ಫಲಿತಾಂಶದ ಆಧಾರದ ಮೇಲೆ ಪ್ರಚಾರ ತಂತ್ರವನ್ನು ರೂಪಿಸುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾಗವಾಗಿರುವ ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕುಂದಾಪುರ, ಕಾರ್ಕಳ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ಗೆ ಸವಾಲಾಗಿದ್ದರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಚಿಕ್ಕಮಗಳೂರು, ಮೂಡಿಗೆರೆ, ತರೀಕೆರೆ ವಿಧಾನಸಭಾ ಕ್ಷೇತ್ರಗಳು ಬಿಜೆಪಿಗೆ ಸವಾಲಾಗಿವೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 32,776 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕುಂದಾಪುರದಲ್ಲಿ ಬಿಜೆಪಿ ಅಭ್ಯರ್ಥಿ 41,556 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 13,004 ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಅತಿ ಕಡಿಮೆ ಗೆಲುವಿನ ಅಂತರವಿದ್ದು, 4,602 ಮತಗಳ ಅಂತರವಾಗಿತ್ತು.
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಅಂತರ 201 ಮತಗಳಾಗಿದ್ದರೆ, ಮೂಡಿಗೆರೆಯಲ್ಲಿ 722 ಮತಗಳ ಅಂತರ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 5,926 ಮತಗಳ ಅಂತರವಾಗಿತ್ತು. ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಉತ್ತಮ ಗೆಲುವಿನ ಅಂತರವನ್ನು ಕಂಡಿದೆ, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ 12,131 ಮತಗಳ ಅಂತರದಿಂದ ಗೆದ್ದಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಲೆ ತನ್ನ ಪರವಾಗಿರಲಿದೆ ಎಂದು ಬಿಜೆಪಿ ನಂಬಿದೆ. ಇದೇ ವೇಳೆ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವುದು ಕಾಂಗ್ರೆಸ್ ಶಾಸಕರಿಗೆ ಪ್ರತಿಷ್ಠೆಯ ವಿಷಯವಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ 91,938 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದರೆ, ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ನ ಒಟ್ಟು ಮುನ್ನಡೆ 18,980 ಮತಗಳು. ಹಾಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಇನ್ನೂ ಹಿಡಿತ ಹೊಂದಿದೆ ಎಂದು ಹೇಳಬಹುದು, ಆದಾಗ್ಯೂ ಜಾತಿ ಸಮೀಕರಣ ಮತ್ತು ರಾಜ್ಯ ಸರ್ಕಾರದ ಗ್ಯಾರಂಟಿಗಳಂತಹ ಇತರ ಅಂಶಗಳು ಮತದಾರರ ಮೇಲೆ ಪರಿಣಾಮ ಬೀರಿದರೆ ಕಾಂಗ್ರೆಸ್ಗೆ ಲಾಭವಾಗಬಹುದು.
ಸದ್ಯಕ್ಕೆ ಬಿಜೆಪಿ ಮುಂದಿರುವುದು ವಿಧಾನಸಭೆ ಚುನಾವಣೆಯಲ್ಲಿ ಕೈಬಿಟ್ಟು ಹೋಗಿರುವ ಚಿಕ್ಕಮಗಳೂರು ಜಿಲ್ಲೆಯ 18,980 ಮತಗಳನ್ನು ತನ್ನತ್ತ ಸೆಳೆದುಕೊಳ್ಳುವ ಸವಾಲು. ಇದೇ ವೇಳೆ ಕಾಂಗ್ರೆಸ್ಗೆ ಉಡುಪಿ ಜಿಲ್ಲೆಯಲ್ಲಿ 91,938 ಮತಗಳನ್ನು ಸೆಳೆಯುವ ದೊಡ್ಡ ಸವಾಲು ಇದೆ.
ವಿಧಾನಸಭೆ ಚುನಾವಣೆಗೂ ಲೋಕಸಭೆ ಚುನಾವಣೆಗೂ ವ್ಯತ್ಯಾಸವಿದೆ. ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ವಿಷಯಗಳು ಮುಂಚೂಣಿಯಲ್ಲಿರುತ್ತವೆ. ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರಗಳು ಆದ್ಯತೆ ಪಡೆಯುತ್ತವೆ ಎನ್ನುವುದು ಸಾಮಾನ್ಯವಾದ ನಂಬಿಕೆ. ಆದರೆ ಕಾಂಗ್ರೆಸ್ ಈ ಸಲ ಲೋಕಸಭೆಗೂ ಸ್ಥಳೀಯ ವಿಚಾರಗಳನ್ನೇ ಹೈಲೈಟ್ ಮಾಡುತ್ತಿದೆ. ಗ್ಯಾರಂಟಿಗಳ ಜತೆ ಸ್ಥಳೀಯ ಅಭಿವೃದ್ಧಿ ವಿಚಾರ, ಬರ ಪರಿಹಾರ ಮತ್ತು ತೆರಿಗೆ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ ಮಾಡಿದೆ ಎಂಬ ವಿಚಾರಗಳನ್ನೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಬಿಜೆಪಿ ರಾಮ ಮಂದಿರ ನಿರ್ಮಾಣ, ಮೋದಿಯವರ ವರ್ಚಸ್ಸು, ದೇಶ ಸಾಧಿಸಿರುವ ಪ್ರಗತಿ ಇತ್ಯಾದಿ ರಾಷ್ಟ್ರೀಯ ವಿಚಾರಗಳನ್ನು ನೆಚ್ಚಿಕೊಂಡಿದೆ.






























































