ಉಡುಪಿ : ಹಿರಿಯಡ್ಕದ ರೌಡಿಯ ಮನೆಯ ಮೇಲೆ ದಾಳಿ ಮಾಡಿರುವ ಪೊಲೀಸರು ಸಜೀವ ಗುಂಡುಗಳು ಹಾಗೂ ಇನ್ನಿತರ ಕೆಲವು ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ರೌಡಿ ದಿವಾಕರ್ ಎಂಬಾತನ ಮನೆಗೆ ದಾಳಿ ನಡೆಸಲಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಧು ಬಿ.ಇ. ಅವರಿಗೆ ಹಿರಿಯಡ್ಕ ಠಾಣಾ ವ್ಯಾಪ್ತಿಯ ರೌಡಿ ದಿವಾಕರ ಎಂಬಾತ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆ ಮಂಗಳವಾರ ಸಿಬ್ಬಂದಿಯೊಂದಿಗೆ ಆತನ ಮನೆಗೆ ತೆರಳಿ ಪರಿಶೀಲಿಸಿದಾಗ ಕಪ್ಪು ಬಣ್ಣದ ಬಟ್ಟೆ ಪೌಚ್, ಸಜೀವ ಮದ್ದು ಗುಂಡುಗಳು, ಮಸಿ ಕೋವಿಗೆ ಬಳಸುವ ಮದ್ದುಗುಂಡುಗಳು, ಪ್ಲಾಸ್ಟಿಕ್ ಪೌಚ್‌ನಲ್ಲಿ ಇರಿಸಲಾದ ಡಿಟೊನೇಟರ್‌ಗಳು, ಪ್ರಾಣಿಯ ಹಲ್ಲಿನ ಆಕಾರದ ವಸ್ತುಗಳು ಹಾಗೂ ಉಗುರಿನ ಆಕಾರದ ವಸ್ತುಗಳು, ಪಿಸ್ತೂಲ್‌ಗೆ ಬಳಸುವ 7.65 ಎಂಎಂ ಸಜೀವ ಗುಂಡುಗಳು, 15 ಇಂಚು ಉದ್ದದ ಹಳೆಯ ಕೋವಿಯ ಮರದ ಬಟ್, ಹಾಕಿ ಸ್ಟಿಕ್, ಸ್ಟೀಲ್ ಚಾಕುಗಳು, ಸ್ಟೀಲಿನ ದೊಡ್ಡ ಗಾತ್ರದ ಮಚ್ಚು, ಗಾಂಜಾ, ಸಣ್ಣ ಖಾಲಿ ಪ್ಲಾಸ್ಟಿಕ್ ಪೌಚ್‌ಗಳು, ಪ್ಲಾಸ್ಟಿಕ್ ಕ್ಯಾನ್‌ನಲ್ಲಿ ತುಂಬಿಸಿಟ್ಟಿರುವ ಸ್ಪಿರಿಟ್ ಪತ್ತೆಯಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ವಿವಿಧ ಕಾಯ್ದೆಗಳ ಅಡಿ ಪ್ರಕರಣ ದಾಖಲಾಗಿದೆ.
ಹಿರಿಯಡ್ಕ : ರೌಡಿಯ ಮನೆಯಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ಪತ್ತೆ





































