ಕುಖ್ಯಾತ ಡಾನ್‌, ರಾಜಕಾರಣಿ ಮುಖ್ತಾರ್‌ ಅನ್ಸಾರಿ ಜೈಲಿನಲ್ಲಿ ಸಾವು

ಲಖನೌ: ಉತ್ತರಪ್ರದೇಶದ ಕುಖ್ಯಾತ ಡಾನ್‌ ಕಮ್‌ ರಾಜಕಾರಣಿ ಮುಖ್ತಾರ್ ಅನ್ಸಾರಿ ಗುರುವಾರ ರಾತ್ರಿ ಜೈಲಿನಲ್ಲಿ ಸಾವಿಗೀಡಾಗಿದ್ದಾನೆ. ಮುಖ್ತಾರ್ ಅನ್ಸಾರಿಗೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. 8 ಪ್ರಕರಣಗಳಲ್ಲಿ ಮುಖ್ತಾರ್ ಅನ್ಸಾರಿ ಶಿಕ್ಷೆ ಅನುಭವಿಸುತ್ತಿದ್ದ. ಮುಖ್ತಾರ್ ನಿಧನದ ಬಳಿಕ ಘಾಜಿಪುರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಮಂಗಳವಾರ ಬೆಳಗ್ಗೆ ಮುಖ್ತಾರ್‌ ಅನಾರಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅದೇ ದಿನ ಅವನನ್ನು ಜೈಲಿಗೆ ಕಳುಹಿಸಲಾಗಿತ್ತು. ಬುಧವಾರ ಜೈಲಿನಲ್ಲಿ ಆರೋಗ್ಯ ಪರೀಕ್ಷೆ ನಡೆಸಿದಾಗ ಎಲ್ಲವೂ ಸಹಜವಾಗಿತ್ತು.

ಇತ್ತೀಚೆಗೆ ಜೈಲಿನಲ್ಲಿ ತನ್ನನ್ನು ಕೊಲೆ ಮಾಡಲು ಯತ್ನಿಸಲಾಗುತ್ತಿದೆ ಎಂದು ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಅನ್ಸಾರಿ ಆರೋಪಿಸಿದ್ದ. ಆಹಾರದಲ್ಲಿ ಸ್ಲೋ ಪಾಯ್ಸನ್ ನೀಡಲಾಗುತ್ತಿದ್ದು, ಇದರಿಂದ ಆರೋಗ್ಯ ಹದಗೆಡುತ್ತಿದೆ ಎಂದು ಹೇಳಿದ್ದ.
ಮುಖ್ತಾರ್ ಅನ್ಸಾರಿ ಎರಡು ಬಾರಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಸೇರಿದಂತೆ ಐದು ಬಾರಿ ಮೌ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ. ಕೊನೆಯ ಬಾರಿಗೆ 2017ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ.
ಕಳೆದ ಮಾರ್ಚ್ 13 ರಂದು, ನ್ಯಾಯಾಲಯ 1990ರಲ್ಲಿ ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ನಕಲಿ ದಾಖಲೆಗಳನ್ನು ಬಳಸಿದ ಪ್ರಕರಣದಲ್ಲಿ ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಮುಖ್ತಾರ್‌ ಅನ್ಸಾರಿ ವಿರುದ್ಧ ಕೊಲೆ ಸೇರಿದಂತೆ ಎಂಟು ಪ್ರಕರಣಗಳಿದ್ದವು. ಬಿಎಸ್‌ಪಿ ಮತ್ತು ಸಮಾಜವಾದಿ ಪಾರ್ಟಿ ಸೇರಿ ಅಟ್ಟಹಾಸ ಮೆರೆಯುತ್ತಿದ್ದ ಮುಖ್ತಾರ್‌ ಅನ್ಸಾರಿಯನ್ನು ಯೋಗಿ ಆದಿತ್ಯನಾಥ್‌ ಸರಕಾರ ಬಂದ ಬಳಿಕ ಪೊಲೀಸರು ಹೆಡೆಮುರಿ ಕಟ್ಟಿದ್ದರು.











































error: Content is protected !!
Scroll to Top