ಮುರ್ಸೆ ಸಂಘದ 24ನೇ ವರ್ಷದ ಸತ್ಯನಾರಾಯಣ ಪೂಜೆ – ಧಾರ್ಮಿಕ ಸಭೆ
ಹೆಬ್ರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ವಲಯದ ಕಾಸನ್ ಮಕ್ಕಿ ಒಕ್ಕೂಟ ವ್ಯಾಪ್ತಿಯ ಮುರ್ಸೆ ಸಂಘದ 24ನೇ ವರ್ಷದ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ಮಾ. 12ರಂದು ನಡೆಯಿತು.
ಯೋಜನಾಧಿಕಾರಿ ಲೀಲಾವತಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ ಮೂಲ ಸ್ವರೂಪವನ್ನು ಬಿಟ್ಟುಕೊಡದೆ ಕಾಲಕ್ಕೆ ತಕ್ಕಂತೆ ತನ್ನ ಕರ್ತವ್ಯವನ್ನು ಸುಧಾರಿಸಿಕೊಳ್ಳುತ್ತಾ ಬಂದಿದೆ. ಇದರಿಂದಾಗಿ ಇದೀಗ ಯೋಜನೆಯಿಂದ ಕೃಷಿಕರಿಗೆ, ಮಹಿಳೆಯರಿಗೆ, ಯುವಕ ಯುವತಿಯರಿಗೆ, ಅನಾರೋಗ್ಯ ಪೀಡಿತರಿಗೆ, ದುಡಿಯುವ ಸಾಮರ್ಥ್ಯವಿಲ್ಲದವರಿಗೆ ಮತ್ತು ವಿದ್ಯಾರ್ಥಿ ವರ್ಗಕ್ಕೆ ಸೌಲಭ್ಯಗಳು ಸಿಗುವಂತಾಗಿದೆ. ಸಮಾಜದ ಒಳಿತನ್ನು ಬಯಸುವ ಎಲ್ಲರ ಜೊತೆಯಲ್ಲಿ ಸೇರಿಕೊಂಡು ಅಭಿವೃದ್ಧಿಯ ಹೆಜ್ಜೆಯನ್ನು ಇರಿಸುತ್ತಿರುವುದು ಯೋಜನೆಯ ವೈಶಿಷ್ಟ್ಯತೆಯಾಗಿದೆ ಎಂದು ಹೇಳಿದರು.
ನಾಡ್ಪಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮಣ್ಣ ಪೂಜಾರಿ ಮಾತನಾಡಿ, ಯಾವುದೇ ಸ್ವಾರ್ಥವಿಲ್ಲದೆ ದಾನ ಧರ್ಮಗಳನ್ನು ಮಾಡುತ್ತಾ ಬಂದಲ್ಲಿ ಧರ್ಮ ಶಾಶ್ವತವಾಗಿ ಉಳಿಯುವುದು. ಈ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆತಯ ಕಾರ್ಯವೈಖರಿ ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ಕುಮಾರ್ ವಹಿಸಿದ್ದರು. ಹೆಬ್ರಿ ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಹೆಗ್ಡೆ, ಹಾಸನಕ್ಕಿ ಒಕ್ಕೂಟದ ಅಧ್ಯಕ್ಷೆ ರೇವತಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ, ಪಂಚಾಯತ್ ಸದಸ್ಯರು, ರಾಘವೇಂದ್ರ, ಮೇಲ್ವಿಚಾರಕ ಹೆಚ್. ಉದಯ್, ಸೇವಾ ಪ್ರತಿನಿಧಿ ರಾಘವೇಂದ್ರ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.












































