ಕಾರ್ಕಳ : ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕದ ತಿದ್ದುಪಡಿಯನ್ನು ರದ್ದುಗೊಳಿಸುವಂತೆ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಕಾರ್ಕಳ ವಲಯದ ವತಿಯಿಂದ ಮಾ. 12ರಂದು ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಸರಕಾರ ಫೆ. 20ರಂದು ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ (1997)ವನ್ನು ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯಲ್ಲಿ ಹಲವಾರು ದೋಷಗಳಿದ್ದು, ಅವುಗಳು ದೇವಸ್ಥಾನಗಳ ಪರಂಪರೆಯ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಹಾಗಾಗಿ ಈ ಕಲಂಗಳನ್ನು ರದ್ದು ಮಾಡಬೇಕೆಂದು ಕಾರ್ಯಕರ್ತರು ವಿನಂತಿಸಿದ್ದಾರೆ.
ಅನ್ಯ ಸಮುದಾಯದವರಿಗೂ ಹಣ ಬಳಕೆಯಾಗುವ ಸಾಧ್ಯತೆ
ಕಲಂ 19 ರಲ್ಲಿ ಸಾಮಾನ್ಯ ಸಂಗ್ರಹಣ ನಿಧಿಯ ಉಲ್ಲೇಖ ಮಾಡಲಾಗಿದೆ. ಈ ನಿಧಿಯನ್ನು ಇತರ ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ನೀಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಅನ್ಯಮತೀಯರಿಗೂ ಸಹ ಅನ್ವಯ ಮಾಡಲಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನದ ಸಂರಕ್ಷಣೆಗೆ ಮಾರಕ
ಕಲಂ 25 ರಲ್ಲಿ ಸಂಯೋಜಿತ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ರಚನೆ ಸಂದರ್ಭದಲ್ಲಿ ಹಿಂದೂಗಳಲ್ಲದವರನ್ನು ನೇಮಕ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ದೇವಸ್ಥಾನಗಳ ಪರಂಪರೆ ರಕ್ಷಣೆಯ ವಿಷಯದಲ್ಲಿ ಅತ್ಯಂತ ಅಪಾಯಕಾರಿಯಾಗಿದೆ. ಅಲ್ಲದೆ ಕಲಂ 17 ರಲ್ಲಿ ಯಾವ ಸಂಸ್ಥೆಗಳ ಆದಾಯ 1 ಕೋಟಿ ಮೀರಿರುವುದೋ ಅವುಗಳ 10% ನಿವ್ವಳ ಆದಾಯದ ಪ್ರತಿಶತ ಹಣವನ್ನು 5 ರಿಂದ 10 ಲಕ್ಷ ಇರುವ ಆದಾಯ ಇರುವ ದೇವಸ್ಥಾನಗಳ 5 ಶೇ. ಹಣವನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ವರ್ಗಾವಣೆ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ದೇವಸ್ಥಾನಗಳ ಹಣವನ್ನು ದೋಚುವ ಹುನ್ನಾರವಾಗಿದೆ. ಈ ಎಲ್ಲ ಕಲಂಗಳು ದೇವಸ್ಥಾನಗಳ ಸಂರಕ್ಷಣೆ ದೃಷ್ಟಿಯಿಂದ ಅತ್ಯಂತ ಮಾರಕವಿರುವುದರಿಂದ ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನದ ಕೆ.ಬಿ. ಗುರುಪ್ರಸಾದ್, ಅತ್ತೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆನಂದರಾಯ ನಾಯಕ್, ಕಾರ್ಕಳ ಕಾತ್ಯಾಯಿನಿ ದೇವಸ್ಥಾನದ ಜಗದೀಶ್ ಟಿ.ಕೆ., ಗುರುಪ್ರಸಾದ್ ಶೆಣೈ, ಸದಾಶಿವ ಕಾಮತ್, ಪ್ರಕಾಶ್ ರಾವ್, ವೇಣುಗೋಪಾಲ್ ಭಟ್ ಸೇರಿದಂತೆ ಧಾರ್ಮಿಕ ಹಿತ ಚಿಂತಕರು ಹಾಗೂ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿರತ್ತಾರೆ.









































