ಕಾರ್ಕಳ : ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಮೂಲಕ ಪ್ರಾಮಾಣಿಕವಾಗಿ ಸಮಾಜಕ್ಕೆ ಅಳಿಲು ಸೇವೆ ಮಾಡುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಹುಟ್ಟಿಕೊಂಡಿದೆ. ಶಾಲೆಯ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಅರಿತು ಇಂದು ಗಣಕಯಂತ್ರವನ್ನು ಹಸ್ತಾಂತರಿಸಿದ್ದೇವೆ. ಮುಂದಿನ ದಿನಗಳಲ್ಲೂ ಉತ್ತಮ ಸೇವೆಯನ್ನು ಮಾಡುವಲ್ಲಿ ಶಾಲೆಗೆ ಖಂಡಿತವಾಗಿಯೂ ಶ್ರಮಿಸುತ್ತೇವೆ ಎಂದು ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಅಧ್ಯಕ್ಷೆ ಜ್ಯೋತಿ ರಮೇಶ್ ತಿಳಿಸಿದರು. ಅವರು ಮಾ. 9ರಂದು ಸಾಣೂರು ಮುದ್ದಣ್ಣನಗರ ಪ್ರಾಥಮಿಕ ಶಾಲೆಗೆ ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಕಂಪ್ಯೂಟರ್ ಹಸ್ತಾಂತರಿಸಿ ಮಾತನಾಡಿದರು.

ಶಾಲೆಯ ವಿದ್ಯಾರ್ಥಿಗಳಿಗೆ ಉಪಯುಕ್ತವಾದಂತಹ ಗಣಕ ಯಂತ್ರವನ್ನು ನೀಡಿರುವುದರಿಂದ ಕಲಿಕೆಗೆ ಪ್ರಯೋಜನವಾಗಲಿದೆ. ಪ್ರಸ್ತುತ ವಿದ್ಯಮಾನಗಳಲ್ಲಿ ಗಣಕ ಯಂತ್ರದ ಮಹತ್ವದ ಕುರಿತು ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್ ತಿಳಿಸಿದರು. ಲಯನ್ಸ ಕ್ಲಬ್ ಕಾರ್ಕಳ ಸಿಟಿ ಕೋಶಾಧಿಕಾರಿ ವಿಜೇಶ್ ಶೆಟ್ಟಿ, ಸದಸ್ಯ ಟಿ. ಕೆ. ರಘುವೀರ್, ಶಿಕ್ಷಕಿ ಗೀತಾ ಚಂದ್ರ, ಎಸ್ಡಿಎಂಸಿ ಅಧ್ಯಕ್ಷ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸುಧೀರ್ ನಾಯಕ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಳಿಕ ಮಹಿಳಾ ದಿನಾಚರಣೆಯ ಅಂಗವಾಗಿ ಲಯನ್ ಅಧ್ಯಕ್ಷೆ ಜ್ಯೋತಿ ರಮೇಶ್ ಅವರನ್ನು ಗೌರವಿಸಲಾಯಿತು.










































