ಕಾರ್ಕಳ : ಜಿಲ್ಲಾ ಪಂಚಾಯತ್ ಮಂಗಳೂರಿನಲ್ಲಿ ಲೆಕ್ಕಾಧಿಕಾರಿಯಾಗಿರುವ ಶಕುಂತಳಾ ಶೆಣೈ ಅವರು ಕಾರ್ಕಳದವರು. ಕಾರ್ಕಳ ವಸಂತ ಶೆಣೈ ಹಾಗೂ ವಸುಧಾ ಶೆಣೈ ದಂಪತಿ ಪುತ್ರಿ. ಶ್ರೀ ವೆಂಕಟರಮಣ ವಿದ್ಯಾಸಂಸ್ಥೆಯಲ್ಲಿ ಪದವಿ ತನಕ ಓದಿರುವ ಇವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ (ಎಂ.ಕಾಂ.) ಪೂರೈಸಿರುತ್ತಾರೆ. ಎಂ.ಕಾಂ. ಪೂರ್ಣಗೊಂಡ ಬಳಿಕ ಅದೇ ಕಾಲೇಜಿನಲ್ಲಿ ಲೆಕ್ಚರರ್ ಆಗಿ 5 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದು, ಈ ವೇಳೆಯೇ ಕೆಎಸ್‌ಒಯುನಲ್ಲಿ ಎಂಬಿಎ ಮುಗಿಸಿರುತ್ತಾರೆ. ಬಳಿಕ 2018ರಲ್ಲಿ ಲೆಕ್ಕಪರಿಶೋಧಕರ ಹುದ್ದೆಗೆ ನೇಮಕಗೊಂಡಿರುತ್ತಾರೆ. ಮಹಿಳಾ ದಿನಾಚರಣೆಗಾಗಿ ನ್ಯೂಸ್ ಕಾರ್ಕಳ ಅವರನ್ನು ಮಾತನಾಡಿಸಿತು.
ವಿದ್ಯಾರ್ಥಿನಿಯರಿಗೆ ಏನು ಕಿವಿಮಾತು ಹೇಳ ಬಯಸುವಿರಿ?
ನಾವು ನಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡಲು ಹೋಗಬಾರದು. ಬಾವಿಯೊಳಗಿನ ಕಪ್ಪೆಯಾಗದೆ ಬಾವಿಯಿಂದ ಹೊರಬಂದು ಜೀವನದ ಸಾರ್ಥಕ್ಯ ಕಾಣಬೇಕು. ಉತ್ತಮ ಬದುಕು ರೂಪಿಸಿಕೊಳ್ಳಲು ನಾವೇ ನಮ್ಮ ಭವಿಷ್ಯದ ಅಡಿಪಾಯಕ್ಕೆ ಮುನ್ನುಡಿ ಬರೆಯಬೇಕು.

ಮರೆಯಲಾರದ ಕ್ಷಣ ಯಾವುದು?
ನನ್ನ ಪರಿಶ್ರಮದ ಫಲವಾಗಿ ಕೆಪಿಎಸ್‌ಸಿ ಮಾಡಿದೆ. ಕೆಪಿಎಸ್‌ಸಿ ಸಂದರ್ಶನದಲ್ಲಿ ಸಂದರ್ಶನಕಾರರು ಅಂತಿಮವಾಗಿ ಹೇಳಿದ ಮಾತು you are the best qualified for the post ಎಂಬುದು ನನ್ನ ಜೀವನದ ಸ್ಮರಣೀಯ ಕ್ಷಣ.
ಪ್ರಮುಖವಾಗಿ ಮಹಿಳೆಯರು ಎದುರಿಸುವ ಸವಾಲುಗಳೇನು?
ಇಂದಿನ ಕಂಪ್ಯೂಟರ್ ಯುಗದಲ್ಲಿ ಮಹಿಳೆ ಇರದ ಕ್ಷೇತ್ರವಿರದು. ಮನೆಯೊಳಗಿನಿಂದ ಹಿಡಿದು ಬಾಹ್ಯಾಕಾಶದವರೆಗೂ ತನ್ನ ಕೈಚಾಚಿದ್ದಾಳೆ. ಪ್ರತಿ ಮಹಿಳೆ ತನ್ನ ಮನೆ, ಸಂಸಾರ, ಕಚೇರಿ ಕರ್ತವ್ಯ ಎಂಬ ಹೊಣೆಗಾರಿಕೆ, ತನ್ನ ಆರೋಗ್ಯ ಮತ್ತು ಮಾನಸಿಕ ಸುಸ್ಥಿತಿಯನ್ನು ಕಾಯ್ದುಕೊಳ್ಳುವುದು ಒಂದು ಪ್ರಮುಖ ಸವಾಲಾಗಿದೆ.
ನಿಮಗೆ ಸ್ಫೂರ್ತಿ ಯಾರು ?
ಗುರುಗಳ ಮೇಲಿನ ಭಯ, ಗೌರವ, ಭಕ್ತಿ, ತಂದೆ – ತಾಯಿ ನನ್ನ ಮೇಲಿರಿಸಿದ ನಂಬಿಕೆ ಇವೆಲ್ಲವೂ ನನ್ನ ಸಾಧನೆಗೆ ಸ್ಫೂರ್ತಿದಾಯಕ.

































