ಕಸ ಹಾಕುವವರ ವಿರುದ್ಧ ಕಠಿಣ ಕ್ರಮ – ಹೆಬ್ರಿ ಗ್ರಾಮ ಪಂಚಾಯತ್‌

ಹೆಬ್ರಿ : ಹೆಬ್ರಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸ್ವಚ್ಛತಾ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಅದಾಗ್ಯೂ ಬೇಕು ಬೇಕಂತಲೇ ಕಸ ಹಾಕಿ ಪರಿಸರವನ್ನು ಹಾಳು ಮಾಡುತ್ತಿರುವುದಲ್ಲದೆ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೆಬ್ರಿ ಗ್ರಾಮ ಪಂಚಾಯತ್‌ ಅಧ್ಯಕ್ಷ ತಾರನಾಥ್‌ ಬಂಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ಸ್ವಚ್ಛತಾ ವಾಹನದ ಮೂಲಕ ಹೆಬ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪೇಟೆ ಹಾಗೂ ಸುತ್ತಮುತ್ತಲಿನ ಪರಿಸರದ ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸಲಾಗುತ್ತಿದೆ. ಕಳೆದ ಆರು ವರುಷಗಳಿಂದ ಕ್ರಮಬದ್ಧವಾಗಿ ಕಸ ವಿಲೇವಾರಿ ಕೆಲಸ ನಡೆಯುತ್ತಿದ್ದು, ಇದಕ್ಕಾಗಿ ಒಂದು ಎಕರೆ ಜಾಗದಲ್ಲಿ ಸ್ವಚ್ಛ ಸಂಕೀರ್ಣ ಘಟಕವನ್ನು ನಿರ್ಮಿಸಲಾಗಿದೆ. ಅದರಲ್ಲಿ ಹತ್ತು ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಎಂ.ಆರ್.ಎಫ್. ಘಟಕದಲ್ಲಿ 15 ಜನ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಅಪಪ್ರಚಾರ ಮಾಡದಿರಿ
ಪ್ರತಿನಿತ್ಯ ಮುಂಜಾನೆ 4:30ರಿಂದ 7ಗಂಟೆಯೊಳಗೆ ಸಂಪೂರ್ಣವಾಗಿ ಕಸಗಳನ್ನು ಗುಡಿಸಿ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ. ಆದರೂ ಯಾರೋ ದುರುದ್ದೇಶದಿಂದ ಬಸ್‌ಸ್ಟ್ಯಾಂಡಿನಲ್ಲಿ ಕಸಗಳನ್ನು ಹಾಕಿ ಪ್ರಚಾರಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರು ನಮ್ಮ ಸ್ವಚ್ಛ ಸಂಕೀರ್ಣದಲ್ಲಿ ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ಕಸದ ವಿಲೇವಾರಿಯನ್ನು ಪರೀಕ್ಷಿಸಬಹುದು ಮತ್ತು ಅವರಿಗೂ ಕೂಡ ವೇತನ ನೀಡಲಾಗುವುದು ಎಂದು ಅಧ್ಯಕ್ಷರು ಹೇಳಿದ್ದಾರೆ.

ಕಠಿಣ ಕ್ರಮ
ಇದೇ ರೀತಿ ಪಂಚಾಯತ್‌ನ ಹೆಸರು ಕೆಡಿಸುವ ದುರ್ವತನೆ ಮುಂದುವರಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವುದು ಕಂಡು ಬಂದರೂ ಅವರ ವಿರುದ್ದ ದಂಡ ವಿಧಿಸುವಂತಹ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



















































































error: Content is protected !!
Scroll to Top