ಹೃದಯಾಘಾತ ಎಂದು ನಂಬಿಸಲು ಪಾಕಿಸ್ಥಾನ ಯತ್ನ
ಇಸ್ಲಾಮಾಬಾದ್ : ಪಾಕಿಸ್ಥಾನದಲ್ಲಿ ಇನ್ನೋರ್ವ ಭಾರತ ವಿರೋಧಿ ಲಷ್ಕರ್ ಉಗ್ರ ಸತ್ತಿದ್ದಾನೆ. ಮುಂಬಯಿಯ ಮೇಲೆ ಉಗ್ರರನ್ನು ನುಗ್ಗಿಸಿ ದಾಳಿ ಮಾಡಿಸಿದ ಪ್ರರಕಣದ ಮಾಸ್ಟರ್ ಮೈಂಡ್ ಎನ್ನಲಾದ ಲಷ್ಕರ್ ಉಗ್ರ ಸಂಘಟನೆಯ ಗುಪ್ತಚರ ವಿಭಾಗದ ಮುಖ್ಯಸ್ಥನಾಗಿದ್ದ ಆಜಾಮ್ ಚೀಮಾ (70) ಸತ್ತಿದ್ದಾನೆ. ಈತ ಹೃದಯಾಘಾತವಾಗಿ ಸತ್ತಿದ್ದಾನೆ ಎಂದು ಪಾಕಿಸ್ಥಾನ ನಂಬಿಸಲು ಪ್ರಯತ್ನಸುತ್ತಿದೆ. ಆದರೆ ಲಷ್ಕರ್ನ ಹಲವು ಉಗ್ರರು ಈ ಹಿಂದೆ ಅಜ್ಞಾತ ವ್ಯಕ್ತಿಗಳಿಂದ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ಚೀಮಾನನ್ನೂ ಇದೇ ರೀತಿ ಕೊಂದಿರುವ ಸಾಧ್ಯತೆಯಿದೆ ಎಂದು ಪಾಕಿಸ್ಥಾನದ ಮಾದ್ಯಮಗಳು ವರದಿ ಮಾಡಿವೆ.
ಲಷ್ಕರ್ ಇ ತಯ್ಯಬ ಉಗ್ರ ಸಂಘಟನೆಯ ಮೂವರು ಪ್ರಮುಖರಲ್ಲಿ ಆಜಾಮ್ ಚೀಮಾ ಒಬ್ಬನಾಗಿದ್ದ. 2008ರ ನ. 26ರಂದು ಮುಂಬಯಿಗೆ ಹತ್ತು ಉಗ್ರರು ನುಗ್ಗಿ ಬಂದು ತಾಜ್ ಪಂಚತಾರಾ ಹೋಟೆಲ್ ಸಹಿತ ಹಲವೆಡೆ ದಾಳಿ ಮಾಡಿದ ಕೃತ್ಯದ ಸೂತ್ರಧಾರ ಚೀಮಾ ಆಗಿದ್ದ. ಇದಕ್ಕೂ ಮೊದಲು 2006ರಲ್ಲಿ ಮುಂಬಯಿಯ ಲೋಕಲ್ ರೈಲುಗಳಲ್ಲಿ ನಡೆದ ಸರಣಿ ಸ್ಫೋಟಗಳನ್ನೂ ಈತನೇ ಯೋಜಿಸಿದ್ದ. ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್ ಆಗಿದ್ದ ಈತನನ್ನು ಪಾಕಿಸ್ಥಾನ ಗುಪ್ತಚರ ಪಡೆಯೇ ರಕ್ಷಿಸುತ್ತಿತ್ತು.
ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಬವಾಲ್ಪುರದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಿದ್ದ ಚೀಮಾ ಬವಾಲ್ಪುರದಲ್ಲಿರುವ ಲಷ್ಕರ್ನ ಟ್ರೈನಿಂಗ್ ಕ್ಯಾಂಪ್ನ ಮುಖ್ಯಸ್ಥನಾಗಿದ್ದ. ಇಲ್ಲಿಯೇ ಮುಂಬಯಿ ದಾಳಿಯ ಉಗ್ರರಿಗೆ ತರಬೇತಿ ನೀಡಲಾಗಿತ್ತು. ಸದಾ ಅಂಗರಕ್ಷಕರಿಂದ ಸುತ್ತುವರಿದಿರುತ್ತಿದ್ದ ಚೀಮಾನನ್ನು ಕೊಲ್ಲುವುದು ಅಷ್ಟು ಸುಲಭವಾಗಿರಲಿಲ್ಲ. ಹೀಗಾಗಿ ಯಾವ ತಂತ್ರ ಬಳಸಿ ಅವನನ್ನು ಮುಗಿಸಲಾಗಿದೆ ಎನ್ನುವುದು ನಿಗೂಢವಾಗಿದೆ. ಪಾಕಿಸ್ಥಾನ ಸೈನ್ಯದಲ್ಲಿದ್ದ ಚೀಮಾ ಭೂಪಟ ಓದುವುದರಲ್ಲಿ ನಿಷ್ಣಾತನಾಗಿದ್ದ. ಭಾರತದ ಇಂಚು ಇಂಚನ್ನು ಆತ ಭೂಪಟದ ಮೂಲಕವೇ ತಿಳಿದುಕೊಂಡಿದ್ದ. ಮುಂಬಯಿಗೆ ನುಗ್ಗಿ ಯಾವ ಮಾರ್ಗದಲ್ಲಿ ಹೋಗಿ ದಾಳಿ ಮಾಡಬೇಕೆಂದು ಅವನು ಉಗ್ರರಿಗೆ ಕಲಿಸಿದ್ದ.









































