ಆರೋಪಿಯನ್ನು ಗುರುತಿಸಿದ್ದೇವೆ ಎಂದ ಡಿಕೆಶಿ
ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಹೋಟೆಲ್ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸ್ ಮೂಲಗಳು ಈ ಮಾಹಿತಿಯನ್ನು ಖಚಿತ ಪಡಿಸಿಲ್ಲ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಶಂಕೆಯ ಮೇರೆಗೆ ವಿಚಾರಣೆಗೊಳಪಡಿಸಲಾಗಿದ್ದವರ ಪೈಕಿ ಓರ್ವ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಂಕಿತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಬೆಳಗ್ಗೆ ಸುಮಾರು 11.40ರ ವೇಳೆಗ ಆಗಂತುಕ ರಾಮೇಶ್ವರಂ ಕೆಫೆ ಬಂದಿದ್ದಾನೆ. ಹೆಗಲಿಗೆ ಸೈಡ್ಬ್ಯಾಗ್, ತಲೆಗೆ ಟೋಪಿ ಹಾಕಿಕೊಂಡು ರಾಮೇಶ್ವರಂ ಕೆಫೆ ಪ್ರವೇಶಿಸಿದ್ದಾನೆ. ಹೊಟೇಲ್ನಲ್ಲಿ ಸ್ವಲ್ಪ ಹೊತ್ತು ಗಮನಿಸಿ ಕಾಲ ಕಳೆದಿದ್ದಾನೆ. ನಂತರ ತಿಂಡಿ ತಿಂದು ಬ್ಯಾಗನ್ನು ಹ್ಯಾಂಡ್ವಾಷ್ ಬಳಿ ಇರಿಸಿದ್ದಾನೆ.
ಬ್ಯಾಗ್ ಇಟ್ಟು ಹೋದ 1 ಗಂಟೆ ಬಳಿಕ ಸ್ಫೋಟ
ಬ್ಯಾಗ್ ಇಟ್ಟುಹೋದ ಒಂದು ಗಂಟೆಯ ನಂತರ ಬ್ಲಾಸ್ಟ್ ಆಗಿದ್ದು, ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿ ಯಾರೆಂದು ಬಹುತೇಕ ಗೊತ್ತಾಗಿದೆ. ಆರೋಪಿ ಪತ್ತೆಗಾಗಿ ಸಿಸಿಬಿಯಿಂದ ಕಾರ್ಯಾಚರಣೆ ನಡೆಸಿದ್ದು, ಕೆಲವೇ ಘಂಟೆಗಳಲ್ಲಿ ಆರೋಪಿಯನ್ನ ಬಂಧನ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಶಂಕಿತ 28-30 ವರ್ಷ ವಯಸ್ಸಿನವನಾಗಿದ್ದು, ಬಿಎಂಟಿಸಿ ಬಸ್ನಲ್ಲಿ ರಾಮೇಶ್ವರಂ ಕೆಫೆಗೆ ಬಂದು ಕೂಪನ್ ಖರೀದಿಸಿ, ರವಾ ಇಡ್ಲಿ ಆರ್ಡರ್ ಮಾಡಿ, ಬ್ಯಾಗ್ ಇಟ್ಟು ಹೊರಟು ಹೋಗಿದ್ದಾನೆ. ಶೋಧ ಕಾರ್ಯಕ್ಕಾಗಿ 8 ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆತನ ಸಿಸಿಟಿವಿ ದೃಶ್ಯಾವಳಿಗಳು ಪತ್ತೆಯಾಗಿವೆ.
ಈ ನಡುವೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ, ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ್ದಾರೆ. ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಅವರು ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಈ ವೇಳೆ ರಾಜ್ಯಪಾಲರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಸಂಸದ ಪಿಸಿ ಮೋಹನ್ ಇದ್ದರು.









































