ಮಂಗಳೂರು: ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್(65) ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಅವರು ಮೂರು ದಶಕಕ್ಕೂ ಹೆಚ್ಚಿನ ಕಾಲ ಉದಯವಾಣಿ ಪತ್ರಿಕೆಯ ಮಂಗಳೂರು ವರದಿಗಾರರಾಗಿ ಸೇವೆ ಸಲ್ಲಿಸಿ ಬ್ಯೂರೊ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.
ಮೂಲತಃ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ ನವ ಭಾರತ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಅಲ್ಲಿಂದ ಮೊದಲ್ಗೊಂಡು ಮುಖ್ಯ ವರದಿಗಾರರಾಗಿ, ಬಳಿಕ ಬ್ಯೂರೋ ಚೀಫ್ ಆಗಿದ್ದ ಅವರು ಬಳಿಕ ಸಹಾಯಕ ಸಂಪಾದಕರಾಗಿದ್ದರು ಇದರೊಂದಿಗೆ ಸತತ 36 ವರ್ಷ ಪತ್ರಿಕೆ ಸೇವೆ ಸಲ್ಲಿಸಿದ್ದ ಅವರು ಎರಡು ವರ್ಷದ ಹಿಂದೆ ನಿವೃತ್ತಿಗೊಂಡಿದ್ದರು. ಆರಂಭದಿಂದ ನಿವೃತ್ತಿಯ ತನಕವೂ ಒಂದೇ ಪತ್ರಿಕೆಯಲ್ಲಿದ್ದು ನಿಷ್ಠೆ ಮೆರೆದಿದ್ದರು.
ನಿವೃತ್ತಿಯ ನಂತರ ಅವರು ನ್ಯೂಸ್ ಕಾರ್ಕಳವೂ ಸೇರಿದಂತೆ ಹಲವು ಸುದ್ದಿಮಾಧ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಕಳ ಉತ್ಸವ ಸಂದರ್ಭ ನ್ಯೂಸ್ ಕಾರ್ಕಳ ಹೊರತಂದ ಪುಸ್ತಕದ ಸಂಪಾದಕರಾಗಿ ಸಹಕರಿಸಿದ್ದರು. ನ್ಯೂಸ್ ಕಾರ್ಕಳಕ್ಕಾಗಿ ಸಂದರ್ಶನ, ಲೇಖನ ಇತ್ಯಾದಿ ಕೊಡುಗೆಗಳನ್ನು ನೀಡಿದ್ದು ಮಾತ್ರವಲ್ಲದೆ ಸಲಹೆ ಸೂಚನೆಗಳನ್ನು ನೀಡಿ ನ್ಯೂಸ್ ಕಾರ್ಕಳದ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತಿದ್ದರು.
ಮನೋಹರ್ ಪ್ರಸಾದ್ ಅವರ ಪಾರ್ಥಿವ ಶರೀರವು ಮಂಗಳೂರು ಕದ್ರಿಯ ಲೋಬೊ ಲೇನ್ನ ಈಶಾ ಲ್ಯಾಂಡ್ ಟ್ರೇಡ್ಸ್ ಫ್ಲ್ಯಾಟ್ನಲ್ಲಿದ್ದು, ಮಧ್ಯಾಹ್ನ ತನಕ ಅಂತಿಮ ದರ್ಶನ ಮಾಡಬಹುದು. ಧಾರ್ಮಿಕ ವಿಧಿ ವಿಧಾನಗಳ ಬಳಿಕ ಸಂಜೆ ನಾಲ್ಕು ಗಂಟೆಗೆ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ, ಶ್ರದ್ಧಾಂಜಲಿ ಸಲ್ಲಿಕೆ ನಡೆಯಲಿದ್ದು, ಬಳಿಕ ಕದ್ರಿ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.































































