ಸರ್ವಜ್ಞನ ಹೆಸರು ಅಜರಾಮರ – ಸತೀಶ್ ಕುಲಾಲ್‌

ಕಾರ್ಕಳ : ನಮ್ಮ ಜೀವನ ಇತರರಿಗೆ ಮಾದರಿಯಾಗಬೇಕು. ಅಂತಹ ಸಾರ್ಥಕ ಸಾಧನೀಯ ಜೀವನ ಸರ್ವಜ್ಞರದ್ದಾಗಿದೆ.‌ ವಚನಗಳ‌ ಮೂಲಕ‌ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಸರ್ವಜ್ಞನ ಹೆಸರು ಅಜರಾಮರ ಎಂದು ಸತೀಶ್‌ ಕುಲಾಲ್‌ ಹೊಸ್ಮಾರು ಅಭಿಪ್ರಾಯಪಟ್ಟರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಫೆ. 20 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸರ್ವಜ್ಞ ಜಯಂತಿ ಆಚರಣೆ‌ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಸಾಮರಸ್ಯವಿದ್ದಲ್ಲಿ ಸಮಸ್ಯೆ ಇರದು
ಸಾಮರಸ್ಯದ ಭಾವನೆಯಿದ್ದಲ್ಲಿ ಸಮಸ್ಯೆಯಿಲ್ಲ ಎಂಬ ಸಂದೇಶವನ್ನು ವಚನಗಳ ಮೂಲಕ ಸರ್ವಜ್ಞ ಸಮಾಜಕ್ಕೆ ನೀಡಿದ್ದಾರೆ. ಮಹನೀಯರ ವಚನಗಳ ಪಾಲನೆಯೊಂದಿಗೆ ಸಾರ್ಥಕ ಜೀವನ‌‌‌ವನ್ನು ನಮ್ಮದಾಗಿಸೋಣ ಎಂದವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ನರಸಪ್ಪ, ಸರ್ವರಿಗೂ ಜ್ಞಾನ ನೀಡಿದವರೇ ಸರ್ವಜ್ಞ. ಸಾಮಾಜಿಕ ಪಿಡುಗುಗಳ ವಿರುದ್ಧ ಕಾಲಕ್ಕೆ ಅನುಗುಣವಾಗಿ ಜನಸಾಮಾನ್ಯರ ಭಾಷೆಯಲ್ಲಿ ವಚನ ರಚನೆಯ ಮೂಲಕ ಸಮಾಜ ಸುಧಾರಣೆ ಕೈಗೊಂಡ ಸರ್ವಜ್ಞ ಸಮಾಜಕ್ಕೆ ಎಂದಿಗೂ ಮಾದರಿ ಎಂದು ಹೇಳಿದರು.

ಗುರುದತ್ತ್ ಎಂ.‌ಎನ್. ಮಾತನಾಡಿ, ಸರ್ವಜ್ಞರಂತಹ ಮಹನೀಯರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಸಮಾಜದ ಎಲ್ಲರೂ ಜೊತೆಯಾಗಿ ಸಂಭ್ರಮಿಸಿದಾಗ ಮಹನೀಯರ ಆಚರಣೆ ಅರ್ಥಪೂರ್ಣವಾಗುತ್ತದೆ. ಸಂವಿಧಾನದಲ್ಲಿರುವ ಸಮಾನತೆ, ನ್ಯಾಯ, ಸಾಮರಸ್ಯದ ಮಾತುಗಳನ್ನೇ ಸರ್ವಜ್ಞರು ವಚನದ ರೂಪದಲ್ಲಿ ಹೇಳಿದ್ದಾರೆ. ಅಂತಹ ಮಹನೀಯರ ಆಚರಣೆ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯ ಜೀವನದಲ್ಲಿ ಅಳವಡಿಕೆಯಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಭೋಜ ಕುಲಾಲ್ ಮಾತನಾಡಿ, ಕಾರ್ಕಳದಲ್ಲಿ ರಾಜ್ಯದ ಎರಡನೇ ಸರ್ವಜ್ಞ ವೃತ್ತವಿರುವುದು ಸಮಸ್ತ ಕುಲಾಲ ಸಮುದಾಯಕ್ಕೆ ಹೆಮ್ಮೆಯ ವಿಷಯ. ಮುಂದಿನ ವರ್ಷದೊಳಗೆ ಸರ್ವಜ್ಞ ವೃತ್ತದಲ್ಲಿ ಈಗಿರುವುದಕ್ಕಿಂತಲೂ ದೊಡ್ಡ ಮೂರ್ತಿ ಪ್ರತಿಷ್ಠಾಪಿಸುವ ಯೋಜನೆ‌ ಹೊಂದಿದ್ದೇವೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ರೂಪ ಟಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಾನಿಲ್ತಾರ್ ಕುಲಾಲ್ ಸಂಘದ ಅಧ್ಯಕ್ಷ ಜಯರಾಮ್ ಕುಲಾಲ್, ಶಿವಪುರ ಸಂಘದ ಅಧ್ಯಕ್ಷ ಉದಯ್ ಕುಲಾಲ್, ಹೆಬ್ರಿ ಸಂಘದ ಅಧ್ಯಕ್ಷ ಸುರೇಂದ್ರ ಕುಲಾಲ್, ಕುಲಾಲ ಕುಂಬಾರ ಯುವ ವೇದಿಕೆ ಜಿಲ್ಲಾಧ್ಯಕ್ಷ ದಿವಾಕರ ಎಂ. ಬಂಗೇರ, ಕಾರ್ಕಳ ತಾಲೂಕು ಯುವ ವೇದಿಕೆ ಅಧ್ಯಕ್ಷ ಉದಯ್ ಕುಲಾಲ್, ಹೊಸ್ಮಾರು ಸಂಘದ ಅಧ್ಯಕ್ಷ ಪ್ರಮೋದ್ ಕುಲಾಲ್, ಇರ್ವತ್ತೂರು ಸಂಘದ ಅಧ್ಯಕ್ಷ ಸುರೇಶ್, ಕೆರ್ವಾಶೆ ಸಂಘದ ಗೌರವಾಧ್ಯಕ್ಷ ಜಯರಾಂ ಬಂಗೇರ, ಇನ್ನಾ ಗ್ರಾ. ಪಂ. ಮಾಜಿ ಅಧ್ಯಕ್ಷ ಕುಶ ಆರ್. ಮೂಲ್ಯ, ಕುಲಾಲ ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ಕುಲಾಲ್ ಹಾಗೂ ಕುಲಾಲ ಸಮುದಾಯದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪುಷ್ಪಾ ಪ್ರಾರ್ಥಿಸಿದರು. ಕಂದಾಯ ನಿರೀಕ್ಷಕ ರಿಯಾಜ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಸರ್ವಜ್ಞ ವೃತ್ತದಲ್ಲಿ ಸರ್ವಜ್ಞನ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.



























































































































error: Content is protected !!
Scroll to Top