ಅಡುಗೆ ಸಿಬ್ಬಂದಿಯ ಮೇಲಿನ ದೌರ್ಜನ್ಯ ಖಂಡನೀಯ – ಸುರೇಶ್ ಕಲ್ಲಾಗರ
ಕಾರ್ಕಳ : ಕೇಂದ್ರ ಸರಕಾರ ಅಕ್ಷರ ದಾಸೋಹ ನೌಕರ ಯೋಜನೆಗೆ ನಿರಂತರವಾಗಿ ಕಡಿತ ಮಾಡುತ್ತಿರುವುದು ಯೋಜನೆಯನ್ನು ಬಲಹೀನಗೊಳಿಸಿ ಖಾಸಗೀಕರಣಕ್ಕೆ ಅನುಕೂಲ ಮಾಡಿಕೊಡುವುದಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಅವರು ಫೆ. 16ರಂದು ಕಾರ್ಕಳ ತಾಲೂಕು ಕಚೇರಿ ಎದುರು ನಡೆದ ಅಕ್ಷರ ದಾಸೋಹ ನೌಕರರ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ವೇತನ ಹೆಚ್ಚಳಕ್ಕೆ ನೌಕರರು ಹೋರಾಟ ನಡೆಸುತ್ತಿದ್ದರೂ, ಕೇಂದ್ರ ಹಾಗೂ ರಾಜ್ಯ ಸರಕಾರ ನೌಕರರ ಕುರಿತು ಅಸಡ್ಡೆ ತೋರುತ್ತಿದೆ. ಹಲವು ವರ್ಷಗಳ ಸೇವೆ ಸಲ್ಲಿಸಿದ 60 ವರ್ಷದ ನೌಕರರನ್ನು ಬರಿಗೈಯಲ್ಲಿ ಮನೆಗೆ ಕಳುಹಿಸುತ್ತಿರುವ ಅಮಾನವೀಯತೆ ಬಗ್ಗೆ ಯಾವ ರಾಜಕಾರಣಿಗಳು ಮಾತನಾಡುತ್ತಿಲ್ಲ. ಇದೇ ನೌಕರರಿಂದ ಚುನಾವಣೆ ಸಂದರ್ಭದಲ್ಲಿ ಬಿಟ್ಟಿ ಕೆಲಸಗಳನ್ನು ಮಾಡಿಕೊಳ್ಳಲಾಗುತ್ತಿದೆ ಅಲ್ಲದೆ ಕೇಂದ್ರ ಸರಕಾರ ನಿರಂತರವಾಗಿ ಯೋಜನೆಗೆ ನೀಡುತ್ತಿರುವ ಅನುದಾನ ಕಡಿತಗೊಳಿಸುತ್ತಾ ಬಂದಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಡುಗೆ ಸಿಬ್ಬಂದಿ ಮೇಲೆ ದೌರ್ಜನ್ಯ ಖಂಡನೆ
ಇತ್ತೀಚೆಗೆ ಬೈಲೂರು ಶಾಲೆಯೊಂದರಲ್ಲಿ ಬಿಸಿಯೂಟದ ಮುಖ್ಯ ಅಡುಗೆಯವರ ಮೇಲೆ ಅಡುಗೆ ಕೋಣೆಗೆ ನುಗ್ಗಿ ಹಲ್ಲೆ ನಡೆಸಲು ಯತ್ನಿಸಿದ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಮತ್ತಿತರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ಈ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಯನ್ನು ಒತ್ತಾಯಿಸಿದರು.
ಇದೇ ಸಂದರ್ಭ ಇವೆಲ್ಲಾ ವಿಚಾರವನ್ನೊಳಗೊಂಡ ಮನವಿಯನ್ನು ತಾ. ಪಂ. ಇಓ ಗುರುದತ್ತ್ ಹಾಗೂ ಅಕ್ಷರ ದಾಸೋಹ ಇಲಾಖೆಯ ನಿರ್ದೇಶಕರಿಗೆ ನೀಡಲಾಯಿತು.
ಪ್ರತಿಭಟನೆಯಲ್ಲಿ ಅಕ್ಷರದಾಸೋಹ ನೌಕರರ ಸಂಘದ ಮುಖಂಡರಾದ ಶಾಲಿನಿ ಬೆಳ್ಮಣ್, ರಾಜೇಶ್ವರಿ ಬೈಲೂರು, ಸುಹಾಸಿನಿ ಬಜಗೊಳಿ, ಪ್ರಭಾ ಪಾಟ್ಕರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ನಾಗೇಶ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸುನೀತಾ ಶೆಟ್ಟಿ ವಂದಿಸಿದರು






































