ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ ಸಿದ್ದರಾಮಯ್ಯ : ಬಿಜೆಪಿ ಟೀಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಕರ್ನಾಟಕ ಬಜೆಟ್​​ ಬಗ್ಗೆ ರಾಜ್ಯ ಬಿಜೆಪಿ ವ್ಯಂಗ್ಯವಾಡಿದ್ದು, ಮುಖ್ಯಮಂತ್ರಿಗಳು ರಾಜ್ಯದ ಜನರನ್ನು ಸಾಲದ ಹೊರೆಗೆ ದೂಡಿದ್ದಾರೆ ಎಂದು ವಾಗ್ದಾಳಿ ನಡೆಸಿದೆ. ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿ ಸಂದೇಶ ಪ್ರಕಟಿಸಿರುವ ಬಿಜೆಪಿ, ಇದು ಬಜೆಟ್ ಅಲ್ಲ, ಇದು ಕರ್ನಾಟಕ ಜನತೆಯ ಕಿವಿ ಮೇಲೆ ಹೂವಿನ ತೋಟ ಎಂದು ವ್ಯಂಗ್ಯಚಿತ್ರವೊಂದರ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

‘ಸಾಲ ಶೂಲದ ಹರಿಕಾರ ಸಾಲರಾಮಯ್ಯ. ಸಾಲವೇ ಎಲ್ಲದಕ್ಕೂ ವಾಮಮಾರ್ಗ ಎಂದುಕೊಂಡಿರುವ ಈ ಶತಮಾನದ ನಕಲಿ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಸಾಲ ರಾಜ್ಯವನ್ನಾಗಿ ಪರಿವರ್ತಿಸಿದ್ದಾರೆ. ಅಧಿಕಾರಕ್ಕೆ ಬಂದು ಕೇವಲ 9 ತಿಂಗಳಲ್ಲಿ 1,93,246 ಕೋಟಿ ರೂಪಾಯಿ ಸಾಲ‌ ಮಾಡಿದ್ದಾರೆ. ಅಂದರೆ ಪ್ರತಿಯೊಬ್ಬ ಕನ್ನಡಿಗನ ತಲೆ ಮೇಲೆ 28 ಸಾವಿರ ರೂಪಾಯಿ ಸಾಲ ಹೇರಿದ್ದಾರೆ ಎಂದು ಬಿಜೆಪಿ ಕಾಲೆಳೆದಿದೆ.

‘ಸಾಲರಾಮಯ್ಯನವರು ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ಲಕ್ಷಾಂತರ ಕೋಟಿ ಸಾಲ ಮಾಡಿ ಕನ್ನಡಿಗರನ್ನು ಸಂಪೂರ್ಣವಾಗಿ ಮುಳುಗಿಸಿದ್ದಾರೆ. ಸಾಲದ ಸುಳಿಗೆ ಕರುನಾಡು ಸಿಲುಕಿದೆ. ಕರ್ನಾಟಕ ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಬಿದ್ದಿದೆ. ಆರ್ಥಿಕತೆ ಹಳ್ಳ ಹಿಡಿದಿದೆ’ ಎಂದು ಬಿಜೆಪಿ ಕಿಡಿಕಾರಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಬಜೆಟ್ ಬಗ್ಗೆ ಟೀಕೆ ಮಾಡಿದ್ದು, ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ರೈತ ವಿರೋಧಿ ಬಜೆಟ್ ಆಗಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇದೊಂದು ಶೂನ್ಯ ಬಜೆಟ್. ಕರ್ನಾಟಕ ರಾಜ್ಯವನ್ನು ಈ ಬಜೆಟ್ 20 ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದೆ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಜೆಡಿಎಸ್ ನಾಯಕ ಎಚ್.​ಡಿ. ಕುಮಾರಸ್ವಾಮಿ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಸಿದ್ದರಾಮಯ್ಯ ಬಜೆಟ್​​ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಒಟ್ಟು 3 ಗಂಟೆ 14 ನಿಮಿಷ ಸುದೀರ್ಘ ಬಜೆಟ್ ಭಾಷಣ ಮಾಡಿದ್ದಾರೆ. ಅವರು ಈ ಬಾರಿ ಮಂಡಿಸಿದ ಬಜೆಟ್ ಗಾತ್ರ ಒಟ್ಟು 3,71,383 ಕೋಟಿ ರೂಪಾಯಿ ಆಗಿದೆ.











































































error: Content is protected !!
Scroll to Top