ಜೆರೋಸಾ ಪ್ರಕರಣ : ಡಿಡಿಪಿಐ ವರ್ಗಾವಣೆ

ಮಂಗಳೂರು: ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಸೈಂಟ್‌ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಅಯೋಧ್ಯೆಯ ಶ್ರೀರಾಮ ದೇಗುಲ ನಿರ್ಮಾಣ ಮತ್ತು ಹಿಂದೂ ಧರ್ಮವನ್ನು ಅವಹೇಳನ ಮಾಡಿರುವ ಘಟನೆ ಈಗ ಪೂರ್ಣ ಪ್ರಮಾಣದಲ್ಲಿ ರಾಜಕೀಯ ವಿವಾದವಾಗಿ ಪರಿವರ್ತಿತವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಈ ವಿಚಾರವಾಗಿ ಕಿತ್ತಾಟ ಶುರುಮಾಡಿದ್ದು, ಈ ನಡುವೆ ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ದಯಾನಂದ ಆರ್. ನಾಯ್ಕ್ ಅವರನ್ನು ಬುಧವಾರ ದಿಢೀರ್‌ ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಕಲಬುರ್ಗಿ ಡಿಡಿಪಿಐ ಆಗಿದ್ದ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ನೇಮಿಸಿದೆ.

ಸೈಂಟ್ ಜೆರೋಸಾ ಶಾಲೆಯ ಘಟನೆಯನ್ನು ನಾಯ್ಕ್‌ ನಿರ್ವಹಿಸಿದ ರೀತಿಗೆ ವ್ಯಾಪಕ ಟೀಕೆಗಳು ವ್ಯಕ್ತವಾದ ನಂತರ ಈ ಬೆಳವಣಿಯಾಗಿದೆ. ಡಿಡಿಪಿಐ ನಾಯ್ಕ್ ಅವರು ಸೂಕ್ಷ್ಮ ವಿಷಯವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ರಮಾನಾಥ್ ರೈ ಮಂಗಳವಾರ ಆರೋಪಿಸಿದ್ದರು. ಸಿಪಿಐ(ಎಂ) ಮತ್ತು ಇತರ ಸಂಘಟನೆಗಳು ನಾಯಕ್ ಅವರನ್ನು ದೂಷಿಸಿದ್ದವು. ಅಲ್ಲದೇ, ಘಟನೆ ಬಗ್ಗೆ ತನಿಖೆ ನಡೆಸಲು ಅವರಿಗೆ ಅವಕಾಶ ನೀಡದಂತೆ ಸರ್ಕಾರವನ್ನು ಒತ್ತಾಯಿಸಿದ್ದವು.ಇದರ ಬೆನ್ನಿಗೆ ನಾಯ್ಕ್‌ ಅವರನ್ನು ವರ್ಗಾವಣೆ ಮಾಡಿದ್ದು, ಇದಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸ್ಥಳೀಯ ಕಾಂಗ್ರೆಸ್‌ ನಾಯಕರ ಒತ್ತಡಕ್ಕೆ ಮಣಿದು ಸರಕಾರ ಡಿಡಿಪಿಐ ಅವರನ್ನು ವರ್ಗಾಯಿಸಿದೆ ಎಂದು ಹೇಳಲಾಗಿದೆ. ಶಾಲೆಯಲ್ಲಿ ಧರ್ಮದ ಅವಹೇಳನವನ್ನು ದಿಟ್ಟವಾಗಿ ನಿಭಾಯಿಸಿದ ಅಧಿಕಾರಿಗೆ ಸರಕಾರ ವರ್ಗಾವಣೆ ಶಿಕ್ಷೆಯನ್ನು ನೀಢಿದೆ. ಇದು ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಗೆ ಇನ್ನೊಂದು ಉದಾಹರಣೆ ಎಂದು ಹಲವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಈ ಮಧ್ಯೆ ಜೆರೋಸಾ ಘಟನೆಗೆ ಕಳವಳ ವ್ಯಕ್ತಪಡಿಸಿದ ಮಂಗಳೂರು ಧರ್ಮಪ್ರಾಂತ್ಯ ಈ ಬಗ್ಗೆ ನ್ಯಾಯಕ್ಕಾಗಿ ಕೋರಿದೆ. ಧಾರ್ಮಿಕ ಮುಖಂಡರಾದ ಜೆ.ಬಿ ಸಲ್ದಾನ ಮತ್ತು ರಾಯ್ ಕ್ಯಾಸ್ಟಲಿನೊ ಅವರು ಶಿಕ್ಷಕಿ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತ ಎಂದು ಬಣ್ಣಿಸಿದ್ದಾರೆ.
ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಶಿಕ್ಷಕಿ ಭರವಸೆ ನೀಡಿದ ಬಳಿಕವೂ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಅವರು ಶಾಲೆಯ ಮುಂದೆ ಪ್ರತಿಭಟನೆ ನಡೆಸುವ ಮೂಲಕ ನ್ಯಾಯಯುತ ತನಿಖೆಯ ಸಾಂವಿಧಾನಿಕ ಪ್ರಕ್ರಿಯೆಯ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವಂತೆ ಶಿಕ್ಷಕಿ ಅಂತಹ ಯಾವುದನ್ನೂ ಕಲಿಸಿಲ್ಲ ಅಥವಾ ಹೇಳಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಆಯೋಗ ಈ ಬಗ್ಗೆ ನ್ಯಾಯಯುತ ತನಿಖೆ ನಡೆಸುವಂತೆ ಮಂಗಳೂರು ಧರ್ಮಪ್ರಾಂತ್ಯ ಮನವಿ ಮಾಡಿದೆ.































































error: Content is protected !!
Scroll to Top