ಲಯನ್ಸ್‌ ಕಾರ್ಕಳ ಸಿಟಿ ಕ್ಲಬ್‌ಗೆ ಜಿಲ್ಲಾ ಗವರ್ನರ್‌ ಭೇಟಿ

ಎರಡು ವರುಷದಲ್ಲಿ ಮಹತ್ತರ ಸಾಧನೆ – ಡಾ. ನೇರಿ ಕರ್ನೇಲಿಯೋ

ಕಾರ್ಕಳ : ಒಬ್ಬ ವ್ಯಕ್ತಿಯಿಂದ ಮಾಡಲು ಅಸಾಧ್ಯವಾದುದನ್ನು ಸಂಘಟನೆ ಮೂಲಕ ಮಾಡಬಹುದು. ಸಂಘಟನೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಬೆಳಕು ಯೋಜನೆಯಡಿ ಮಹತ್ತರ ಸೇವಾ ಕಾರ್ಯಗಳನ್ನು ಮಾಡುತ್ತಿದೆ ಎಂದು ಲಯನ್ಸ್‌ ಜಿಲ್ಲಾ ಗವರ್ನರ್‌ ಡಾ. ನೇರಿ ಕರ್ನೇಲಿಯೋ ಅಭಿಪ್ರಾಯಪಟ್ಟರು. ಅವರು ಫೆ. 13ರಂದು ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಗೆ ಅಧಿಕೃತ ಭೇಟಿ ನೀಡಿ, ಬಳಿಕ ಹೊಟೇಲ್‌ ಮಯೂರದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜಸೇವೆ ಯಾವುದೇ ವ್ಯಕ್ತಿ ಅಥವಾ ಒಂದು ಸಮಾಜಕ್ಕೆ ಮೀಸಲಾಗಿಟ್ಟುಕೊಂಡು ಮಾಡುವುದಲ್ಲ. ಸಾಮಾಜಿಕ ಕಾಳಜಿಯನ್ನು ಒಂದು ಜವಾಬ್ದಾರಿಯ ರೀತಿಯಲ್ಲಿ ನಾವು ತೆಗೆದುಕೊಂಡು ಸೇವೆಗಳ ವ್ಯಾಪ್ತಿಯನ್ನು ನಿರ್ಧಾರ ಮಾಡಿ ಸಾಮಾಜಿಕ ಬೆಂಬಲ, ಶೈಕ್ಷಣಿಕ ಬೆಂಬಲ ಅಲ್ಲದೆ ಅಳಿವಿನಂಚಿನಲ್ಲಿರುವ ವ್ಯವಸ್ಥೆಯನ್ನು ಸರಿಪಡಿಸಲು ನಮ್ಮಿಂದ ಆದಷ್ಟು ಸೇವೆಯನ್ನು ಮಾಡುವುದು. ಶಿಸ್ತುಬದ್ಧ ತಂಡದ ಸದಸ್ಯರೊಡಗೂಡಿ ಬೆಳಕು ಯೋಜನೆಯಡಿ ಕಳೆದೆರಡು ವರುಷದಲ್ಲಿ ಸಿಟಿ ಕ್ಲಬ್‌ ಮಹತ್ತರವಾದ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಉತ್ತಮವಾದ ಸಾಧನೆಯನ್ನು ಮಾಡಿದೆ ಎಂದರು. ಬಳಿಕ ಕ್ಲಬ್‌ ವತಿಯಿಂದ ಗವರ್ನರ್‌ ದಂಪತಿಗಳನ್ನು ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಅಧ್ಯಕ್ಷೆ ಜ್ಯೋತಿ ರಮೇಶ್‌, ಅಲ್ಪಾವಧಿಯಲ್ಲೇ ನಮ್ಮ ಕ್ಲಬ್‌ ಉತ್ತಮ ಕಾರ್ಯಗಳ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡು ಹಲವಾರು ಪ್ರಶಸ್ತಿಗಳಿಗೆ ಭಾಜನವಾಗಿರುವುದು ಸಂತಸದ ಸಂಗತಿ. ಕ್ಲಬ್‌ ಬೆಳವಣಿಗೆಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ಜಿಲ್ಲಾ ಕಾರ್ಯದರ್ಶಿ ರವಿರಾಜ್‌ ನಾಯಕ್‌ ಅವರು ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಗೆ ನೂತನವಾಗಿ ಸೇರ್ಪಡೆ ಗೊಂಡಿರುವ ಟಿ. ವಿ. ಸುಶ್ಮಾ ಮತ್ತು ಶಾಲಿನಿ ರವಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ದ್ವಿತೀಯ ವಿಡಿಜಿ ಸಪ್ನಾ ಸುರೇಶ್‌, ಪ್ರಾಂತ್ಯಾಧ್ಯಕ್ಷ ಪ್ರಸಾದ್‌ ಶೆಟ್ಟಿ ಮತ್ತು ವಲಯಾಧ್ಯಕ್ಷ ರವೀಂದ್ರನಾಥ ಹೆಗ್ಡೆ, ರಾಜೀವ್‌ ಕೋಟ್ಯಾನ್‌, ಹರಿಪ್ರಸಾದ್‌ ರೈ ಶುಭಹಾರೈಸಿದರು. ಜಿಲ್ಲೆಯ ಪ್ರಥಮ ಮಹಿಳೆ ಒಫಿಲಿಯಾ ಫಿಲೋಮಿನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾ ಕಾರ್ಯಕ್ರಮ
ಅತ್ತೂರಿನ ಪರ್ಪಲೆ ಸೇವಕಿ ಆಶ್ರಮದಲ್ಲಿರುವ ವೃದ್ದಾಶ್ರಮಕ್ಕೆ ದಿನಸಿ ಸಾಮಗ್ರಿ, ಹಣ್ಣು ಮತ್ತು ತರಕಾರಿಗಳನ್ನು, ಕಾರ್ಕಳದ ಪತ್ತೊಂಜಿಕಟ್ಟೆ ಶಾಲೆಗೆ ಮೂರು ಮ್ಯಾಪ್‌ ಅನ್ನು ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ನಿರ್ಗತಿಕ, ಅಸ್ವಸ್ಥ ಶ್ವಾನಗಳನ್ನು ಆರೈಕೆ ಮಾಡುತ್ತಿರುವ ಅಹಿಂಸಾ ಪ್ರಾಣಿ ದಯಾ ಕೇಂದ್ರದ ಮುಖ್ಯಸ್ಥ ವಿರಾಂಜಯ ಹೆಗ್ಡೆ ಅವರನ್ನು ಗೌರವಿಸಿ, ಸಂಸ್ಥೆಗೆ ದೇಣಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಮೊದಲಿಗೆ ದಿ. ಚಂದ್ರಹಾಸ ಸುವರ್ಣರ ಭಾವಚಿತ್ರಕ್ಕೆ ಪುಷ್ಪನಮನ ಗೈಯ್ಯಲಾಯಿತು. ವಿಜಯ ಭಾಸ್ಕರ್‌ ಪ್ರಾರ್ಥಿಸಿ, ವಿಜೇಶ್‌ ಶೆಟ್ಟಿ ಧ್ವಜ ವಂದನೆಗೈದರು. ನಿತ್ಯಾನಂದ ಪೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಂಜುನಾಥ್‌ ಡಿ. ರಾವ್‌ ವರದಿ ಮಂಡನೆಗೈದು, ವಂದಿಸಿದರು. ಯೋಗೇಶ್‌ ನಾಯಕ್‌ ಗವರ್ನರ್‌ ಅವರ ಹಾಗೂ ಸಾಯಿರಾಂ ಜಿಲ್ಲಾ ಕಾರ್ಯದರ್ಶಿಯವರ ಪರಿಚಯ ವಾಚಿಸಿದರು. ನೂತನ ಸದಸ್ಯರ ಪರಿಚಯವನ್ನು ರಘುನಾಥ್‌ ಕೆ.ಎಸ್.‌ ಮತ್ತು ಶಿಕ್ಷಕಿ ಪೂರ್ಣಿಮಾ ಶೆಣೈ ಸನ್ಮಾನ ಪತ್ರ ವಾಚಿಸಿದರು. ಗಂಗಾಧರ ಪಣಿಯೂರು ಕಾರ್ಯಕ್ರಮ ನಿರೂಪಿಸಿದರು.







































































error: Content is protected !!
Scroll to Top