ಕಾರ್ಕಳ : ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಫೆ. 14ರಂದು ನಡೆಯಿತು. ಬಂಡೀಮಠದಿಂದ ಆರಂಭಗೊಂಡ ಜಾಥ ವಿದ್ಯಾರ್ಥಿಗಳ ಘೋಷಣೆ, ಚೆಂಡೆ ನಾದದೊಂದಿಗೆ ಕುಕ್ಕುಂದೂರು ಗ್ರಾಮ ಪಂಚಾಯತ್‌ಗೆ ಸಾಗಿಬಂದಿತು.
ಜಯಂತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಕ್ರೆ ಸರಕಾರಿ ಪ್ರೌಢಶಾಲೆ ಮತ್ತು ಕೆಎಂಇಎಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಥ ಸಂಚಲನ ಮಾಡಿದರು. ದಲಿತ ಸಮುದಾಯದ ಮುಖಂಡ ಅಣ್ಣಪ್ಪ ನಕ್ರೆ ಸಂವಿಧಾನದ ಜಾಗೃತಿ ಜಾಥಾಕ್ಕೆ ಶುಭ ಹಾರೈಸಿದರು. ಸಮಾಜ ಕಲ್ಯಾಣ ಇಲಾಖಾ ಸಿಬ್ಬಂದಿ ಜಯಂತಿ ಜೆ. ಸಂವಿಧಾನ ಪೀಠಿಕೆ ಭೋಧಿಸಿದರು. ಈ ಸಂದರ್ಭ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ., ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಉಷಾ ಕೆ., ಕಂದಾಯ ಇಲಾಖೆ ಉಪ ತಹಶೀಲ್ದಾರ್ ಮಂಜುನಾಥ ನಾಯಕ್, ಅಂಗನವಾಡಿ ಕಾರ್ಯಕರ್ತೆಯವರು, ಶಾಲಾ ಮುಖ್ಯ ಶಿಕ್ಷಕರು, ಗ್ರಾಮ ಪಂಚಾಯತ್ ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ನಿರ್ಮಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.


































