ಕಾರ್ಕಳ : ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಲೋಕಾರ್ಪಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲಾ ದೇಗುಲ ಮತ್ತು ತೀರ್ಥ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವಂತೆ ಕರೆ ನೀಡಿದ ಪ್ರಯುಕ್ತ ಹಾಗೂ ಕಾರ್ಕಳದಲ್ಲಿ ನಡೆಯುತ್ತಿರುವ ಐತಿಹಾಸಿಕ ಆನೆಕೆರೆ ಚತುರ್ಮುಖ ಬಸದಿ ಹಾಗೂ ಜೈನ ಮಠದ ಜೀರ್ಣೋದ್ಧಾರದ ಪ್ರಯುಕ್ತ ಜ. 14ರಂದು ನಾಗರಭಾವಿ, ಗೋಮಟೇಶ್ವರ ಬೆಟ್ಟದಿಂದ ದಾನಶಾಲೆ ಹಾಗೂ ಆನೆಕೆರೆಯವರೆಗೆ ಮಹಾ ಸ್ವಚ್ಛತಾ ಅಭಿಯಾನ ನಡೆಯಿತು.

ಸ್ವಚ್ಚ ಕಾರ್ಕಳ ಬಿಗ್ರೇಡ್ ತಂಡದ ನೇತೃತ್ವದಲ್ಲಿ ನಡೆದ ಈ ಸ್ವಚ್ಛತಾ ಅಭಿಯಾನದಲ್ಲಿ ಯಕ್ಷಬ್ರಹ್ಮ ಕ್ರಿಕೆಟರ್ಸ್ ನೆಲ್ಲಿಕಾರು, ಗೆಳೆಯರ ಬಳಗ ಚೆಂಡೆ, ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿ ಹಾಗು ಅಧ್ಯಾಪಕರ ತಂಡ, ಕಾರ್ಕಳ ಜೈನ ಬ್ರಿಗೇಡ್, ಸ್ವಚ್ಛ ಬಜಗೋಳಿ ಬ್ರಿಗೇಡ್, ಶ್ರೀ ಬುಜಬಲಿ ಆಶ್ರಮದ ವಿದ್ಯಾರ್ಥಿ ಹಾಗು ಸಿಬ್ಬಂದಿ ತಂಡ, ಶ್ರವಿಕಾ ಆಶ್ರಮದ ವಿದ್ಯಾರ್ಥಿನಿಯರು, ವ್ಯವಸ್ಥಾಪಕರು ಮತ್ತು ದಾನಶಾಲೆಯ ವಠಾರದ ನಿವಾಸಿಗಳು ಸೇರಿದಂತೆ ಸುಮಾರು 200 ಮಂದಿ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.
ಈ ಸ್ವಚ್ಛತಾ ಅಭಿಯಾನದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಭಾಗವಹಿಸಿ ಸ್ವಯಂಸೇವಕರನ್ನು ಪ್ರೋತ್ಸಾಹಿಸಿ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಕಾರ್ಯವನ್ನು ಶ್ಲಾಘಿಸಿದರು.


























