ಒಂದು ಸಾವಿರ ಮನೆಗಳಿಗೆ ಮಧ್ಯಾಹ್ನದೊಳಗೆ ಮಂತ್ರಾಕ್ಷತೆ ವಿತರಣೆ
ಕಾರ್ಕಳ : ಪುರಸಭೆಯ 9, 10 ಮತ್ತು 11ನೇ ವಾರ್ಡ್ ರಾಮಭಕ್ತ ಸಮೂಹ ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆಯ ಮಂತ್ರಾಕ್ಷತೆ ವಿತರಣೆಯಲ್ಲಿ ದಾಖಲೆ ನಿರ್ಮಿಸಿದೆ. ರಾಮಭಕ್ತರ 14 ತಂಡ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಪ್ರಾರಂಭಿಸಿ ಒಂದು ಸಾವಿರಕ್ಕೂ ಅಧಿಕ ಹಿಂದೂ ಮನೆಗಳಿಗೆ ತೆರಳಿ ರಾಮ ಮಂತ್ರಾಕ್ಷತೆ ವಿತರಿಸಿದೆ.
ಬೆಳಗ್ಗೆ 7.30ರಿಂದ ರಾಮನಾಮ ಜಪದ ಕಾಲ್ನಡಿಗೆ ಜಾಥಾ ಪ್ರಾರಂಭವಾಗಿತ್ತು. ಸುಮಾರು ಹದಿನೈದು ಸಣ್ಣ ಮಕ್ಕಳು ರಾಮಾಯಣದ ವಿವಿಧ ವೇಷಧರಿಸಿ ಜಾಥಾದಲ್ಲಿ ಭಾಗವಹಿಸಿದರು. ಕಾರ್ಕಳ ಅನಂತಶಯನ ದೇವಸ್ಥಾನದಿಂದ ತೆಳ್ಳಾರು ರಸ್ತೆ ಶ್ರೀ ರಾಘವೇಂದ್ರ ಸ್ವಾಮಿ ಮಠದವರೆಗಿನ ರಾಮಜಪ ಯಾತ್ರೆಯಲ್ಲಿ ನೂರಾರು ರಾಮ ಭಕ್ತರು ಸ್ವಯಂಪ್ರೇರಿತವಾಗಿ ಪಾಲ್ಗೊಂಡರು.

ಮೂರು ವಾರ್ಡ್‌ಗಳ ಹಿಂದೂಗಳ ಪ್ರತಿಯೊಂದು ಮನೆಗೆ ತೆರಳಿ ರಾಮಾಕ್ಷತೆ ವಿತರಿಸುವ ಕಾರ್ಯಕ್ರಮವನ್ನು ಮೂರು ವಾರ್ಡಿನ ರಾಮಭಕ್ತರ ತಂಡ ಯೋಜಿಸಿ ಮಧ್ಯಾಹ್ನದ ಒಳಗಡೆ ಸಾವಿರಕ್ಕೂ ಹೆಚ್ಚು ಹಿಂದೂ ಮನೆಗಳಿಗೆ ತೆರಳಿ ವಿತರಿಸಿದೆ. ಎಲ್ಲ ಹಿಂದೂ ಮನೆಗಳಲ್ಲಿ ಈ ಸಂದರ್ಭದಲ್ಲಿ ಸಂಭ್ರಮದ ವಾತಾವರಣ ಇತ್ತು. ರಾಮ ಸೇವಕರನ್ನು ಭಕ್ತಿಯಿಂದ ಸ್ವಾಗತಿಸಿ ರಾಮ ಮಂತ್ರಾಕ್ಷತೆ ಸ್ವೀಕರಿಸಿದರು.































