ಬರೀ 4 ತಾಸಿನಲ್ಲಿ ಗೋವಾ ತಲುಪಲಿದೆ ವಂದೇ ಭಾರತ್‌

ಮಂಗಳೂರು : ನಾಳೆಯಿಂದ ಶುರುವಾಗಲಿರುವ ಮಂಗಳೂರು-ಗೋವಾ ವಂದೇ ಭಾರತ್‌ ರೈಲಿನ ಬಗ್ಗೆ ಜನರಿಗೆ ಈಗಲೇ ಬಹಳಷ್ಟು ಕುತೂಹಲ ಶುರುವಾಗಿದೆ. ಹೊಸ ವರ್ಷದ ಮೋಜಿನ ಪಾರ್ಟಿಗೆ ಹೋಗುವವರಿಗೆ ಈ ರೈಲು ಬಹಳ ಅನುಕೂಲಕರವಾಗಿದೆ. ಗೋವಾ ಪ್ರವಾಸ ತೆರಳುವವರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದಂತಾಗಿದೆ. ನಾಳೆ ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೊ ಕಾನ್ಫರೆನ್ಸ್‌ ಮೂಲಕ ಈ ರೈಲಿಗೆ ಚಾಲನೆ ನೀಡಲಿದ್ದಾರೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಾಳೆ ಚಾಲನೆ ನೀಡುವ ಸಮಾರಂಭ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಅಧಿಕಾರಿಗಳ ಜೊತೆ ನಿಲ್ದಾಣಕ್ಕೆ ತೆರಳಿ ಪರಿಶೀಲನೆ ನಡೆಸಿದರು. ವಂದೇ ಭಾರತ್ ರೈಲಿಗೆ ಚಾಲನೆ ವೇಳೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಹೊಸ 4 ಮತ್ತು 5ನೇ ಫ್ಲ್ಯಾಟ್‌ ಫಾರಂ ಕೂಡ ಉದ್ಘಾಟನೆಯಾಗಲಿದೆ.
ಮಂಗಳೂರು ಗೋವಾ ವಂದೇ ಭಾರತ್ ರೈಲಿನ ಆರಂಭದೊಂದಿಗೆ ಕರ್ನಾಟಕದಲ್ಲಿ ನಾಲ್ಕನೇ ವಂದೇ ಭಾರತ್‌ ರೈಲು ಕಾರ್ಯಾರಂಭ ಮಾಡಿದಂತಾಗಲಿದೆ.

ಬರೀ 4.15 ತಾಸು ಪ್ರಯಾಣ
ಮಂಗಳೂರು – ಗೋವಾ ವಂದೇ ಭಾರತ್ ಸೂಪರ್ ಫಾಸ್ಟ್ ರೈಲು ಮಂಗಳೂರಿನಿಂದ ಕೇವಲ 4.15 ತಾಸಿನಲ್ಲಿ ಗೋವಾ ತಲುಪಲಿದೆ. ಈ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದ ಆರು ದಿನವೂ ಸಂಚಾರ ಮಾಡಲಿದೆ.

ಮಂಗಳೂರಿನಿಂದ ಬೆಳಗ್ಗೆ 8.30ಕ್ಕೆ ಹೊರಡುವ ವಂದೇ ಭಾರತ್ ಮಧ್ಯಾಹ್ನ 1.15ಕ್ಕೆ ಮಡಗಾಂವ್ ತಲುಪಲಿದೆ. ಸಂಜೆ ಮಡಗಾಂವ್ ನಿಂದ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ತಲುಪಲಿದೆ.

ಈ ರೈಲಿಗೆ ಉಡುಪಿ ಮತ್ತು ಕಾರವಾರದಲ್ಲಿ ಎರಡು ಕಡೆ ಮಾತ್ರ ನಿಲುಗಡೆ ಇರಲಿದೆ. ಇದು ಎಂಟು ಬೋಗಿಗಳ ಹವಾನಿಯಂತ್ರಿತ ವ್ಯವಸ್ಥೆಯ ರೈಲಾಗಿದ್ದು, ವಿಮಾನದ ಮಾದರಿ ಸೀಟುಗಳನ್ನು ಅಳವಡಿಸಿದ್ದಾರೆ. ಜೊತೆಗೆ ಎಕ್ಸಿಕ್ಯುಟಿವ್ ಚೇರ್​​ಗಳ ವ್ಯವಸ್ಥೆ ಇದರಲ್ಲಿದೆ. ರೈಲಿನಲ್ಲೇ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ ಕೂಡ ಇರಲಿದೆ. ವೈ-ಫೈ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಔಟ್‌ಲೆಟ್‌ಗಳು ಮತ್ತು ರೀಡಿಂಗ್ ಲೈಟ್‌ ಸೌಲಭ್ಯ ಇದೆ. ಸ್ವಯಂಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್, ಸಿಸಿಟಿವಿ ಕ್ಯಾಮರಾ, ಸೆನ್ಸಾರ್ ಆಧಾರಿತ ವಾಶ್‌ಬೇಸಿನ್ ಕೂಡ ಇದೆ.

ವಂದೇ ಭಾರತ್‌ ರೈಲಿನಿಂದ ಗೋವಾದ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ಸಿಗಲಿದೆ. ಪ್ರಯಾಣ ಅವಧಿ ಬಹಳಷ್ಟು ಕಡಿಮೆ ಇರುವುದರಿಂದ ಜನರಿಗೂ ಬಹಳ ಅನುಕೂಲಕರ. ಇಷ್ಟು ಮಾತ್ರವಲ್ಲದೆ ಗೋವಾದಲ್ಲಿರುವ ಸಾವಿರಾರು ಕನ್ನಡಿಗರಿಗೆ ಊರಿಗೆ ಹೋಗಿ ಬರಲು ಈ ರೈಲಿನಿಂದ ಬಹಳ ಅನುಕೂಲವಾಗಲಿದೆ. ಆದರೆ ಒಂದೆರಡು ನಿಲುಗಡೆ ಹೆಚ್ಚು ನೀಡಿದ್ದರೆ ಕರಾವಳಿಯ ಜನರಿಗೆ ಮತ್ತು ಪ್ರವಾಸೋದ್ಯಮಕ್ಕೂ ಪ್ರಯೋಜನವಾಗುತ್ತಿತ್ತು. ಮುಖ್ಯವಾಗಿ ಭಟ್ಕಳ, ಕೊಲ್ಲೂರು, ಕುಂದಾಪುರ ಕಡೆಗೆ ಹೋಗುವವರಿಗೆ ಒಂದೆರಡು ನಿಲುಗಡೆ ನೀಡಿದರೆ ಉತ್ತಮ.
ನಮ್ಮ ದೇಶ ಬದಲಾಗುತ್ತಿದೆ ಎನ್ನುವುದಕ್ಕೆ ವಂದೇ ಭಾರತ್‌ ರೈಲು ಸಾಕ್ಷಿ. ಇಂದು ಜಗತ್ತಿನಾದ್ಯಂತ ಪ್ರವಾಸೋದ್ಯಮ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ದೊಡ್ಡ ಮೂಲವಾಗಿದ್ದು, ಗೋವಾದಂಥ ಪ್ರವಾಸಿಗರ ಸ್ವರ್ಗ ಎಂದು ಅರಿಯಲ್ಪಡುವ ರಾಜ್ಯಕ್ಕೆ ಇಂಥ ಸೌಲಭ್ಯ ಸಿಗುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ. ಬೇರೆ ಬೇರೆ ನಗರಗಳಿಂದ ಗೋವಾಕ್ಕೆ ವಂದೇ ಭಾರತ್‌ ರೈಲು ಶುರುವಾಗಲಿ ಎನ್ನುವುದು ನಮ್ಮ ಬೇಡಿಕೆ.
– ಗಣೇಶ್‌ ಶೆಟ್ಟಿ ಇರ್ವತ್ತೂರು
ಉದ್ಯಮಿ, ಕಾರ್ಯದರ್ಶಿ – ಗೋವಾ ಬಂಟರ ಸಂಘ





























































































































error: Content is protected !!
Scroll to Top