ಆಡ್ವಾಣಿ, ಜೋಶಿಯವರಿಗೂ ಇಲ್ಲ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುವ ಅವಕಾಶ

ಅಯೋಧ್ಯೆ: ಅಯೋಧ್ಯೆಯಲ್ಲಿ ಜ. 22ರಂದು ನಡೆಯಲಿರುವ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲೆ ಭಾಗವಹಿಸಬೇಡಿ ಎಂದು ರಾಮ ಮಂದಿರ ಟ್ರಸ್ಟ್‌ ಬಿಜೆಪಿಯ ಹಿರಿಯ ನಾಯಕರಾದ ಎಲ್‌. ಕೆ. ಆಡ್ವಾಣಿ ಮತ್ತು ಮುರಳಿ ಮನೋಹರ್‌ ಜೋಶಿಯವರನ್ನೂ ವಿನಂತಿಸಿದೆ. ಈಗಾಗಲೇ ಟ್ರಸ್ಟ್‌ ಜನರಿಗೆ ಜ. 22ರಂದು ಅಯೋಧ್ಯೆಗೆ ಬರಬೇಡಿ ಎಂದು ಮನವಿ ಮಾಡಿದೆ. ಇದರ ಬೆನ್ನಿಗೆ ಹಿರಿಯರಿಗೂ ಬರಬೇಡಿ ಎಂದು ಹೇಳುತ್ತಿದೆ.

ರಾಮ ಮಂದಿರ ಆಂದೋಲನವನ್ನು 90ರ ದಶಕದಲ್ಲಿ ಆರಂಭಿಸಿದವರೇ ಬಿಜೆಪಿಯ ಹಿರಿಯರಾದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್‌ ಜೋಶಿ. ಆದರೆ ತೀರಾ ಇಳಿಪ್ರಾಯದಲ್ಲಿರುವ ಅವರಿಗೆ ಜನಜಂಗುಳಿ ನಡುವೆ ಓಡಾಡಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ಜ. 22ರ ಉದ್ಘಾಟನಾ ಸಮಾರಂಭಕ್ಕೆ ಬರಬೇಡಿ ಎಂದು ಮನವಿ ಮಾಡಲಾಗಿದೆ.
ಇಬ್ಬರೂ ಬಹಳ ಹಿರಿಯರು ಮತ್ತು ಅವರ ವಯಸ್ಸನ್ನು ಪರಿಗಣಿಸಿ ಅವರನ್ನು ಬರದಂತೆ ವಿನಂತಿಸಲಾಯಿತು. ನಮ್ಮ ವಿನಂತಿಯನ್ನು ಇಬ್ಬರೂ ಒಪ್ಪಿಕೊಂಡರು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ತಿಳಿಸಿದ್ದಾರೆ.
ಜನವರಿ 15ರೊಳಗೆ ಸಿದ್ಧತೆಗಳು ಪೂರ್ಣಗೊಳ್ಳಲಿವೆ ಮತ್ತು ಪ್ರಾಣ ಪ್ರತಿಷ್ಠೆ ಪೂಜೆ ಜನವರಿ 16ರಂದು ಪ್ರಾರಂಭವಾಗಲಿದೆ. ಇದು ಜನವರಿ 22ರವರೆಗೆ ನಡೆಯಲಿದೆ ಎಂದು ರಾಯ್‌ ತಿಳಿಸಿದ್ದಾರೆ.

ಜನವರಿ 24ರಿಂದ ಮುಂದಿನ 48 ದಿನಗಳವರೆಗೆ ಹಿಂದೂ ಆಚರಣೆಗಳು ಮತ್ತು ಸಂಪ್ರದಾಯಗಳ ಪ್ರಕಾರ ‘ಮಂಡಲ ಪೂಜೆ’ ನಿಗದಿಪಡಿಸಲಾಗಿದೆ. ಜನವರಿ 23ರಂದು ಭಕ್ತಾದಿಗಳಿಗೆ ದೇವಾಲಯ ತೆರೆಯಲಿದೆ. ಅಯೋಧ್ಯೆಯ ಮೂರು ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಮಠಗಳು, ದೇವಾಲಯಗಳು ಮತ್ತು ಭಕ್ತರಿಗೆ ಮನೆಗಳು ನೀಡುವ 600 ಕೊಠಡಿಗಳೊಂದಿಗೆ ಸಾಕಷ್ಟು ವಸತಿ ಸೌಕರ್ಯ ಒದಗಿಸುವ ಬಗ್ಗೆ ರಾಯ್‌ ಭರವಸೆ ನೀಡಿದ್ದಾರೆ.















































































































































error: Content is protected !!
Scroll to Top