ಹೆಬ್ರಿ : ಹೆಬ್ರಿ ತಾಲೂಕಿನ ಚಾರ ಗ್ರಾಮ ಪಂಚಾಯತ್ನಲ್ಲಿ ಗ್ರಾಮಸ್ಥರು (ಕೋರಂ) ಇಲ್ಲದೆ ಗ್ರಾಮ ಸಭೆ ಮುಂದೂಡಿಕೆಯಾಗಿದೆ. 2023-24 ನೇ ಸಾಲಿನ ಪ್ರಥಮ ಗ್ರಾಮ ಸಭೆ ಇದಾಗಿದ್ದು ಗ್ರಾಮಸ್ಥರ ಹಾಜರಿ ಕಡಿಮೆ ಇದ್ದ ಕಾರಣ ಸಭೆ ಮುಂದೂಡಿಕೆಯಾಗಿದೆ.
ಪಂಚಾಯತ್ ಅಧ್ಯಕ್ಷ ದಿನೇಶ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆ ಬೆಳಗ್ಗೆ 10-30 ಕ್ಕೆ ಪ್ರಾರಂಭವಾಗಿದ್ದು, ಆರಂಭದಲ್ಲಿ ಬೆರೆಳೆಣಿಕೆಯಷ್ಟು ಜನರಿದ್ದರು. ಕೋರಂ ಇಲ್ಲದೆ ಸಭೆ ನಡೆಸುವಂತಿಲ್ಲ ಎಂದು ಗ್ರಾಮಸ್ಥರಾದ ಸಿ. ಎಂ. ಪ್ರಸನ್ನ ಕುಮಾರ್ ಶೆಟ್ಟಿ, ಸೀತರಾಮ್ ಗಾಣಿಗ, ಸುರೇಶ್ ಪೂಜಾರಿ, ರಾಧಾಕೃಷ್ಣ ಭಟ್, ಮಿಥುನ್ ಶೆಟ್ಟಿ ಮೊದಲಾದವರು ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ದಿನೇಶ್ ಶೆಟ್ಟಿ, ಗ್ರಾಮ ಸಭೆಯ ಕುರಿತು ಸಾಕಷ್ಟು ಪ್ರಚಾರ ನೀಡಲಾಗಿದ್ದು, ಜನರು ಭಾಗಿಯಾಗುತ್ತಿಲ್ಲ. 11.30 ರವರೆಗೆ ಕಾದು ನೋಡುವ ಆದಾಗ್ಯೂ ಜನ ಸೇರದಿದ್ದಲ್ಲಿ ಸಭೆ ಮುಂದೂಡುವ ಎಂದು ವಿನಂತಿಸಿದರು.
ಕಾಟಾಚಾರಕ್ಕಾಗಿ ಗ್ರಾಮ ಸಭೆಯೇ ?
ಒಂದು ಗಂಟೆಯ ಬಳಿಕ 60 ಮಂದಿ ಗ್ರಾಮಸ್ಥರು ಸಭೆಯಲ್ಲಿ ಭಾಗಿಯಾದರು. ಆದರೆ 100 ಜನ ಗ್ರಾಮಸ್ಥರಿಲ್ಲದೆ ಗ್ರಾಮ ಸಭೆ ನಡೆಸಲಾಗುವುದಿಲ್ಲ, ಕಾಟಚಾರಕ್ಕಾಗಿ ಗ್ರಾಮ ಸಭೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ ಗ್ರಾಮಸ್ಥರು ಜನರಿಗೆ ನಿಜವಾಗಿ ಮಾಹಿತಿ ಕೊಡುವ ಉದ್ದೇಶದಿಂದ ಗ್ರಾಮ ಸಭೆ ಮಾಡುತ್ತೀದ್ದೀರಿ ಎಂದಾದರೆ ಸಭೆಯನ್ನು ಮುಂದೂಡಿ ಎಂದು ಆಗ್ರಹಿಸಿದರು. ಇನ್ನು ಕೆಲವರು ನಾವು ಕೆಲಸ ಬಿಟ್ಟು ಬಂದಿದ್ದೇವೆ ಹೀಗೆ ಸಭೆ ಮುಂದೂಡುವುದಾದರೆ ನಮ್ಮ ದಿನ ಕೂಲಿಯನ್ನು ನೀಡಿ ಎಂದು ಆಕ್ರೋಶ ಹೊರ ಹಾಕಿದರು. ಅಂತಿಮವಾಗಿ ಗ್ರಾಮ ಸಭೆಯನ್ನು ಮುಂದೂಡಿಕೆ ಮಾಡಿ ರಾಷ್ಟ್ರಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಕೊನೆಯಾಯಿತು.

ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.





































