ಅಂಗನವಾಡಿಗಳಿಗೆ ಆಹಾರ ಸರಬರಾಜಿನಲ್ಲಿ 600 ಕೋ.ರೂ. ಅವ್ಯವಹಾರ ಆರೋಪ
ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ನಟರಾಜ್ ಶರ್ಮ ಎಂಬವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 600 ಕೋಟಿ ರೂ.ಗಿಂತಲೂ ಹೆಚ್ಚು ಭ್ರಷ್ಟಾಚಾರವಾಗಿದ್ದು, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಸರಬರಾಜಿನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಅನರ್ಹಗೊಂಡಿರುವ ಸಹಕಾರ ಸಂಸ್ಥೆಗಳಿಂದ ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡುವ ಟೆಂಡರ್ ನೀಡಿದ್ದಾರೆ. ಬ್ಲಾಕ್ ಲಿಸ್ಟ್ನಲ್ಲಿರುವ ಕ್ರಿಸ್ಟಿ ಫ್ರೈಡ್ಗ್ರಾಮ್ ಕಂಪನಿ ಜತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಇಲಾಖೆ ಅಧಿಕಾರಿಗಳು ಶಾಮೀಲಾಗಿ ಈ ಟೆಂಡರ್ ನೀಡಿದ್ದಾರೆ ಎಂದು ವಕೀಲ ಶರ್ಮ ಅವರು ಲೋಕಾಯುಕಕ್ಕೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.







































