ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಯುವಕನಿಗೆ ಗಾಯ
ಕಾರ್ಕಳ : ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾರ್ಕಳ ಕಸಬಾದ ಮಾರಿಗುಡಿ ಹತ್ತಿರ ಮಂಗಳವಾರ ಮಧ್ಯಾಹ್ನ 12.55ಕ್ಕೆ ಸಂಭವಿಸಿದೆ. ಶೇಖ್ ಮಹಮ್ಮದ್ ಅಯಾನ್ (17) ಗಾಯಗೊಂಡಿರುವ ಯುವಕ. ಅವರು ಮಧ್ಯಾಹ್ನ ಕಾರ್ಕಳದಿಂದ ಮಂಗಳೂರಿಗೆ ಹೋಗುವ ರೇಷ್ಮಾ ಬಸ್ ಹತ್ತಿದ್ದು, ಚಾಲಕ ಬಸ್‌ಸ್ಟ್ಯಾಂಡಿನಿಂದ ಅನಂತಶಯನ ಕಡೆಗೆ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಹೋದ ಪರಿಣಾಮವಾಗಿ ಹಿಂದಿನ ಬಾಗಿಲಿನಿಂದ ಡಾಮಾರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯ ಮತ್ತು ಎಡಕೈ ಮೊಣಗಂಟಿಗೆ ತರಚಿದ ಗಾಯವಾಗಿದ್ದು, ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅವರ ಸಂಬಂಧಿ ಬೈಲೂರಿನ ರಶೀದ್ ಅಹಮದ್ ಎಂಬವರು ನೀಡಿದ ದೂರಿನ ಪ್ರಕಾರ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೆಳೆಯರ ನಡುವಿನ ಜಗಳ – ಓರ್ವನಿಗೆ ಗಾಯ
ಹೆಬ್ರಿ : ಗೆಳೆಯರ ನಡುವಿನ ಕ್ಷುಲ್ಲಕ ವಿಚಾರದ ಜಗಳದಲ್ಲಿ ಯುವಕನೊಬ್ಬ ಗಾಯಗೊಂಡ ಘಟನೆ ಹೆಬ್ರಿಯಲ್ಲಿ ನ.6ರಂದು ಸಂಭವಿಸಿದೆ. ರಾತ್ರಿ 11.30ರ ವೇಳೆ ಸ್ನೇಹಿತರಾದ ರಾಜೇಶ, ಉದಯ ಮತ್ತು ಪ್ರಸಾದ್ ಎಂಬವರು ಶಿವಪುರ ರಿಕ್ಷಾ ನಿಲ್ದಾಣದ ಬಳಿ ಮಾತನಾಡುತ್ತಿದ್ದಾಗ ಜಗಳ ಶುರುವಾಗಿದೆ. ತಳ್ಳಾಟ, ನೂಕಾಟ ನಡೆದು ರಾಜೇಶ ನೆಲಕ್ಕೆ ಬಿದ್ದಾಗ ಉದಯ ಅಲ್ಲೇ ಬಿದ್ದಿದ್ದ ಯಾವುದೋ ಆಯುಧದಿಂದ ಆತನ ತಲೆಗೆ ಹೊಡೆದ ಪರಿಣಾಮವಾಗಿ ಗಂಭೀರ ಗಾಯವಾಗಿದೆ ಎಂದು ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.





































