ಕೆಲವು ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದ ಹಂತಕ

ಉಡುಪಿ : ಇಲ್ಲಿನ ಸಂತೆಕಟ್ಟೆ ಬಳಿಯಿರುವ ನೇಜಾರಿನ ತೃಪ್ತಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಆರೋಪಿ ಪ್ರವೀಣ್ ಅರುಣ್ ಚೌಗಲೆ(35) ಕೊಲೆ ಮಾಡುವ ಕೆಲವು ದಿನಗಳ ಹಿಂದಷ್ಟೇ ಅವರ ಮನೆಗೆ ಬಂದು ಹೋಗಿದ್ದ ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ.
ಕೊಲೆಗೆ ಆರೋಪಿಯ ಏಕಮುಖ ಪ್ರೇಮವೇ ಕಾರಣ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿದ್ದ ಪ್ರವೀಣ್ ಅರುಣ್ ಚೌಗಲೆಗೆ(35) ಅದೇ ವಿಭಾಗದಲ್ಲಿ ಕೆಲಸ ನಿರ್ವಹಿಸುವ ಕೊಲೆಯಾದ ಅಯ್ನಾಝ್‌ಳೊಂದಿಗೆ ಪ್ರೇಮವಾಗಿತ್ತು. ಆದರೆ ಅಯ್ನಾಝ್‌ ಅವನ ಪ್ರೇಮವನ್ನು ಒಪ್ಪದೆ ವಿರೋಧ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಅಯ್ನಾಝ್‌ ಹುಟ್ಟುಹಬ್ಬಕ್ಕೆ ನೇಜಾರಿನ ಮನೆಗೆ ಬಂದಿದ್ದ ಆರೋಪಿ ಆಕೆಗೆ ಚಿನ್ನದ ಉಂಗುರವನ್ನು ಎಲ್ಲರ ಮುಂದೆ ಹಾಕಿದ್ದ. ಇದರಿಂದ ಅಯ್ನಾಝ್‌ ಮನೆಯವರ ಮುಂದೆ ಮುಜುಗರ ಅನುಭವಿಸಿದ್ದಳು. ಆ ಬಳಿಕ ಪ್ರವೀಣ್‌ನನ್ನು ದೂರ ಮಾಡಲು ಯತ್ನಿಸಿದ್ದಳು. ಆರೋಪಿ ಇದರಿಂದ ವಿಚಲಿತನಾಗಿ ಆಕೆಗೆ ಪದೇಪದೆ ಫೋನು ಮಾಡುತ್ತಿದ್ದ. ನ.12ರಂದು ಆರೋಪಿ 36 ಬಾರಿ ಫೋನ್ ಮಾಡಿದ್ದ. ಅಯ್ನಾಝ್‌ ಕೊಲೆಯಾದ ದಿನವೇ ಬೆಳಗ್ಗೆ 11 ಗಂಟೆಗೆ ದುಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸಲು ಹೋಗಬೇಕಿತ್ತು. ಆದರೆ ಅಂದೇ ಬೆಳಗ್ಗೆ ಯಮರೂಪಿಯಾಗಿ ಬಂದ ಪ್ರವೀಣ್ ಮನೆಯಲ್ಲಿದ್ದ ನಾಲ್ವರನ್ನು ಹತ್ಯೆಗೈದು ಪದಾರಿಯಾಗಿದ್ದ.
ಮೊದಲೊಮ್ಮೆ ಮನೆಗೆ ಬಂದಿದ್ದ ಕಾರಣ ಅವನಿಗೆ ವಿಳಾಸ ಸರಿಯಾಗಿ ತಿಳಿದಿತ್ತು. ಹೀಗಾಗಿ ರಿಕ್ಷಾ ಚಾಲಕನಿಗೆ ಸರಿಯಾದ ರಸ್ತೆ ತೋರಿಸಿದ್ದ.
ಕೃತ್ಯ ಎಸಗಿದ ಬಳಿಕ ಬಸ್ ಮೂಲಕ ಮಂಗಳೂರಿಗೆ ಹೋಗಿ ಅಲ್ಲಿಂದ ತನ್ನ ಕಾರಿನಲ್ಲಿ ಬೆಳಗಾವಿಗೆ ಹೋಗಿ ಪರಿಚಯದ ನೀರಾವರಿ ಇಲಾಖೆಯ ಅಧಿಕಾರಿ ಮನೆಯಲ್ಲಿ ಒಂದು ದಿನ ಅಡಗಿದ್ದ, ಅಲ್ಲಿಂದ ನೇರ ತನ್ನೂರು ಸಾಂಗ್ಲಿ ಹೋಗಿ ಅವಿತುಕೊಳ್ಳುವ ಪ್ಲಾನ್ ರೂಪಿಸಿದ್ದ.
ಕೊಲೆಯಾದ ತಕ್ಷಣ ಅಲರ್ಟ್ ಆದ ಪೊಲೀಸರು ಅಯ್ನಾಝ್‌ ದುಡಿಯುತ್ತಿದ್ದ ಏರ್‌ಪೋರ್ಟಿಗೆ ಭೇಟಿ ನೀಡಿ ಉದ್ಯೋಗಿಗಳ ಮಾಹಿತಿ ಕಲೆ ಹಾಕಿದ್ದಾರೆ ಅಲ್ಲಿ. ರಜೆ ಹಾಕಿದ್ದ ಪ್ರವೀಣನ ಮಾಹಿತಿ ಕಲೆ ಹಾಕಿ ಫೋನ್ ಟ್ರ್ಯಾಪ್‌ ಮಾಡಿದ್ದರು. ಬ್ರಹ್ಮಾವರ ಇನ್‌ಸ್ಪೆಕ್ಟರ್ ದಿವಾಕರ್ ಪಿ.ಎಂ ನೇತೃತ್ವದ ತಂಡ ಕುಡುಚಿ ಪೊಲೀಸರ ಸಹಾಯದಿಂದ ಹಂತಕನನ್ನು ವಶಕ್ಕೆ ಪಡೆದು ಉಡುಪಿಗೆ ಕರೆ ತಂದಿದೆ.
ಆರೋಪಿ ಪ್ರವೀಣ್‌ ಅರುಣ್ ಚೌಗಲೆ ಕುಡಚಿ ಮೂಲಕ ಮಹಾರಾಷ್ಟ್ರ ಅಥವಾ ಆಂಧ್ರ ಪ್ರದೇಶಕ್ಕೆ ಪರಾರಿಯಾಗಲು ಹೊಂಚು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಈ ಹಿಂದೆ CISE ಸಿಬ್ಬಂದಿಯಾಗಿ ಮಂಗಳೂರು ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ.

































































error: Content is protected !!
Scroll to Top