ಕ್ಷೀಣಿಸಿದ ಪಾಕಿಸ್ಥಾನದ ಸೆಮಿಫೈನಲ್‌ ಅವಕಾಶ

ದಕ್ಷಿಣ ಆಫ್ರಿಕ ವಿರುದ್ಧ ಸೋತ ಬಳಿಕ ಪಾಕಿಸ್ಥಾನ ಹಾದಿ ದುರ್ಗಮ

ಹೊಸದಿಲ್ಲಿ : ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ವಿಶ್ವಕಪ್ ಕೂಟದ ತನ್ನ ಆರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ಥಾನ ಕೆಚ್ಚಿನಿಂದ ಹೋರಾಡಿದರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಒಂದು ವಿಕೆಟ್‌ನಿಂದ ಸೋಲು ಕಂಡಿದೆ. ಕೊನೆಯ ಹಂತದವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಪಂದ್ಯದಲ್ಲಿ ಪಾಕಿಸ್ಥಾನ 270 ರನ್‌ಗಳನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿ ಹರಿಣಗಳ ವಿರುದ್ಧ ಸೋಲುಂಡಿದೆ. ಇದರೊಂದಿಗೆ ಪಾಕಿಸ್ಥಾನದ ಸೆಮೆಫೈನಲ್‌ ಹಾದಿ ಕೂಡ ಬಹುತೇಕ ಮುಚ್ಚಿಹೋಗಿದೆ. ಇನ್ನು ಉಳಿದಿರುವುದು ಆದರೆ ಹೋದರೆಗಳ ಲೆಕ್ಕಾಚಾರ. ಇವೆಲ್ಲ ಆದರೆ ಮಾತ್ರ ಪಾಕಿಸ್ಥಾನಕ್ಕೆ ಸೆಮಿಫೈನಲ್‌ ತಲುಪುವ ಕ್ಷೀಣ ಆಸೆಯೊಂದು ಉಳಿದಿದೆ. ಈ ವಿಶ್ವಕಪ್‌ನಲ್ಲಿ ಇದುವರೆಗೆ ಆಡಿದ ಆರು ಪಂದ್ಯಗಳಲ್ಲಿ ಪಾಕಿಸ್ಥಾನ ನಾಲ್ಕರಲ್ಲಿ ಸೋತು ನಾಲ್ಕು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಮುಂದಿನ ಮೂರು ಉಳಿದಿರುವ ಲೀಗ್ ಹಂತದ ಪಂದ್ಯಗಳನ್ನು ಗೆದ್ದರೆ ಮತ್ತು ಇತರ ಪಂದ್ಯಗಳ ಒಂದೆರಡು ಫಲಿತಾಂಶಗಳು ಪಾಕ್ ಪರವಾಗಿ ಆದರೆ, ಸೆಮಿ ಫೈನಲ್​ಗೇರಬಹುದು. ಬಾಂಗ್ಲಾದೇಶ (ಅಕ್ಟೋಬರ್ 31), ನ್ಯೂಜಿಲ್ಯಾಂಡ್ (ನವೆಂಬರ್ 4) ಮತ್ತು ಇಂಗ್ಲೆಂಡ್ (ನವೆಂಬರ್ 11) ವಿರುದ್ಧದ ಪಂದ್ಯಗಳಲ್ಲಿ ಪಾಕ್ ಗೆಲ್ಲಲೇ ಬೇಕು. ಆಗ 10 ಅಂಕ ಪಾಕ್ ಖಾತೆಗೆ ಸೇರುತ್ತದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ 10 ಅಂಕಗಳನ್ನು ಹೊಂದಿದೆ. ಹೀಗಾಗಿ ಈ ಎರಡು ತಂಡಗಳನ್ನು ಮುಟ್ಟಲು ಪಾಕ್​ಗೆ ಸಾಧ್ಯವಿಲ್ಲ. ಪಾಕ್ ಮೂರು ಅಥವಾ ನಾಲ್ಕನೇ ಸ್ಥಾನದ ಮೇಲೆ ಕಣ್ಣಿಡಬೇಕು. ಅದು ಸಾಧ್ಯವಾಗಬೇಕಾದರೆ ಈ ರೀತಿ ನಡೆಯಬೇಕು.

ಲೆಕ್ಕಾಚಾರ

ನ್ಯೂಜಿಲ್ಯಾಂಡ್ ಆಸ್ಟ್ರೇಲಿಯಾವನ್ನು ಸೋಲಿಸಬೇಕು, ಬಾಂಗ್ಲಾದೇಶ ನೆದರ್‌ಲ್ಯಾಂಡ್ಸ್ ಅನ್ನು ಸೋಲಿಸಬೇಕು, ಭಾರತ ಇಂಗ್ಲೆಂಡನ್ನು ಸೋಲಿಸಬೇಕು, ಶ್ರೀಲಂಕಾ ಅಫ್ಘಾನಿಸ್ಥಾನವನ್ನು ಸೋಲಿಸಬೇಕು, ಪಾಕಿಸ್ಥಾನ ಬಾಂಗ್ಲಾದೇಶವನ್ನು ಸೋಲಿಸಬೇಕು, ನ್ಯೂಜಿಲ್ಯಾಂಡ್ ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕು, ಭಾರತ ಶ್ರೀಲಂಕಾವನ್ನು ಸೋಲಿಸಬೇಕು, ಅಫ್ಘಾನಿಸ್ಥಾನ ನೆದರ್‌ಲ್ಯಾಂಡ್ಸ್ ಅನ್ನು ಸೋಲಿಸಬೇಕು, ಪಾಕಿಸ್ಥಾನ ನ್ಯೂಜಿಲ್ಯಾಂಡನ್ನು ಸೋಲಿಸಬೇಕು, ಇಂಗ್ಲೆಂಡ್ ಆಸ್ಟ್ರೇಲಿಯವನ್ನು ಸೋಲಿಸಬೇಕು, ಭಾರತ ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕು, ಶ್ರೀಲಂಕಾ ಬಾಂಗ್ಲಾದೇಶವನ್ನು ಸೋಲಿಸಬೇಕು, ಆಸ್ಟ್ರೇಲಿಯ ಅಫ್ಘಾನಿಸ್ಥಾನವನ್ನು ಸೋಲಿಸಬೇಕು, ಇಂಗ್ಲೆಂಡ್ ನೆದರ್‌ಲ್ಯಾಂಡ್ಸನ್ನು ಸೋಲಿಸಬೇಕು, ನ್ಯೂಜಿಲ್ಯಾಂಡ್ ಶ್ರೀಲಂಕಾವನ್ನು ಸೋಲಿಸಬೇಕು, ದಕ್ಷಿಣ ಆಫ್ರಿಕಾ ಅಫ್ಘಾನಿಸ್ಥಾನವನ್ನು ಸೋಲಿಸಬೇಕು, ಬಾಂಗ್ಲಾದೇಶ ಆಸ್ಟ್ರೇಲಿಯಾವನ್ನು ಸೋಲಿಸಬೇಕು, ಪಾಕಿಸ್ಥಾನ ಇಂಗ್ಲೆಂಡನ್ನು ಸೋಲಿಸಬೇಕು, ಭಾರತವು ನೆದರ್‌ಲ್ಯಾಂಡ್ಸ್‌ ಅನ್ನು ಸೋಲಿಸಬೇಕು
ಈ ಎಲ್ಲ ಪಂದ್ಯಗಳ ಫಲಿತಾಂಶ ಈ ರೀತಿ ಬಂದರೆ ಭಾರತ 18 ಅಂಕಗಳೊಂದಿಗೆ, ನ್ಯೂಜಿಲೆಂಡ್ 14, ದಕ್ಷಿಣ ಆಫ್ರಿಕಾ 12 ಮತ್ತು ಪಾಕಿಸ್ತಾನ 10 ಅಂಕಗಳೊಂದಿಗೆ ಆಸ್ಟ್ರೇಲಿಯ ಮತ್ತು ಶ್ರೀಲಂಕಾವನ್ನು ಹಿಂದಿಕ್ಕಿ ಸೆಮಿ ಫೈನಲ್​ಗೇರುವ ಅವಕಾಶ ಹೊಂದಿದೆ. ಆದಾಗ್ಯೂ, ಬಾಂಗ್ಲಾದೇಶದ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಲು ಯಶಸ್ವಿಯಾದರೆ, ಪಾಕಿಸ್ಥಾನ ಮತ್ತು ಆಸ್ಟ್ರೇಲಿಯಾ ತಲಾ 10 ಅಂಕಗಳೊಂದಿಗೆ ಸಮನಾಗಿರುತ್ತವೆ. ಆಗ ರನ್​ರೇಟ್ ಆಧಾರದ ಮೇಲೆ ನಿರ್ಧಾರ ಮಾಡಬೇಕು. ಒಟ್ಟಾರೆ ಪಾಕಿಸ್ಥಾನ ಇತರ ತಂಡಗಳ ಪಂದ್ಯದ ಫಲಿತಾಂಶ ತನ್ನ ಪರವಾಗಿ ಬರಲಿ ಎಂದು ಪ್ರಾರ್ಥಿಸುತ್ತಾ ಸೆಮಿಫೈನಲ್‌ ಹಾದಿ ನಿರೀಕ್ಷಿಸಬೇಕಾಗಿದೆ. ಈ ಪಂದ್ಯಗಳಲ್ಲಿ ಒಂದೆರಡು ಫಲಿತಾಂಶ ವ್ಯತ್ಯಾಸವಾದರೂ ಪಾಕ್‌ ತಂಡ ತವರಿಗೆ ಗಂಟುಮೂಟೆ ಕಟ್ಟಬೇಕಾಗುತ್ತದೆ.



























































































































error: Content is protected !!
Scroll to Top