ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ದೂರು
ಬೆಂಗಳೂರು: ವರ್ತೂರು ಸಂತೋಷ್ ಹುಲಿ ಉಗುರು ಅಳವಡಿಸಿದ ಸರ ಹಾಕಿಕೊಂಡ ತಪ್ಪಿಗೆ ಅವರನ್ನು ಬಿಗ್ಬಾಸ್ ರಿಯಾಲಿಟಿ ಶೋ ಮನೆಯಿಂದಲೇ ಪೊಲೀಸರು ಬಂಧಿಸಿಕೊಂಡು ಹೋದ ಬಳಿಕ ನಟ ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ ಮತ್ತು ವಿನಯ್ ಗುರೂಜಿಗೂ ಇದೇ ಸಂಕಷ್ಟ ಎದುರಾಗಿದೆ. ಬೆಂಗಳೂರಿನಲ್ಲಿರುವ ಸರ್ವಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ. ಶಿವಕುಮಾರ್ ನಾಯಕ್ ಎಂಬುವವರು ದರ್ಶನ್ ಮತ್ತು ವಿನಯ್ ಗುರೂಜಿ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ನಟ ದರ್ಶನ್ ತಮ್ಮದೊಂದು ಫೋಟೋದಲ್ಲಿ ಚಿನ್ನದ ಚೈನ್ನಲ್ಲಿ ಹುಲಿಯ ಉಗುರು ಇರುವ ಲಾಕೆಟನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ವಿನಯ್ ಗುರೂಜಿ ಭಾವಚಿತ್ರವೊಂದರಲ್ಲಿ ಹುಲಿಯ ಚರ್ಮದ ಮೇಲೆ ಕುಳಿತಿರುವುದು ಕಾಣಿಸುತ್ತಿದೆ. ಇದು ಕಾನೂನಿನ ಉಲ್ಲಂಘನೆಯಾಗಿದೆ. ಅರಣ್ಯ ಕಾಯ್ದೆಯಡಿ ಇವರ ಮೇಲೆ ದೂರು ದಾಖಲು ಮಾಡಬೇಕೆಂದು ಸರ್ವ ಸಂಘಟನೆಗಳ ಒಕ್ಕೂಟದಿಂದ ಅಧ್ಯಕ್ಷರು ಸಿ.ಎಂ. ಶಿವಕುಮಾರ್ ಒತ್ತಾಯಸಿದ್ದಾರೆ.
ದರ್ಶನ್ ಅವರು ಅರಣ್ಯ ರಾಯಭಾರಿ ಆಗಿದ್ದಾರೆ. ಅವರಿಗೆ ಕನಿಷ್ಠ ಪ್ರಜ್ಞೆ ಇಲ್ಲವೇ? ದರ್ಶನ್ ಹುಲಿಯ ಉಗುರು ಇರುವ ಬಂಗಾರದ ಚೈನ್ ಹಾಕಿದ್ದಾರೆ. ಅವರಿಂದ ಕಾನೂನಿನ ಉಲ್ಲಂಘನೆ ಆಗಿದೆ. ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕುಳಿತಿದ್ದಾರೆ. ಹುಲಿಯ ಉಗುರು ಇದ್ದ ಕಾರಣಕ್ಕೆ ವರ್ತೂರು ಸಂತೋಷ ಅವರನ್ನು ಬಂಧಿಸಿದ್ದೀರಿ. ಅದೇ ರೀತಿ ನಟ ದರ್ಶನ್, ವಿನಯ್ ಗುರೂಜಿಯನ್ನೂ ಕರೆಸಿ ವಿಚಾರಿಸಿ. ಅವರು ಧರಿಸಿದ ಹುಲಿ ಉಗುರು ಅಸಲಿಯೋ ಅಥವಾ ನಕಲಿಯೋ ಅನ್ನೋದನ್ನು ಪರಿಶೀಲನೆ ಮಾಡೋದು ಅರಣ್ಯಾಧಿಕಾರಿಗಳ ಕರ್ತವ್ಯ ಎಂದು ಹೇಳಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹಿಸುವುದು ತಪ್ಪಾಗುತ್ತದೆ. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10,000 ರೂ ದಂಡ ವಿಧಿಸುವ ಸಾಧ್ಯತೆ ಇದೆ.































































