ದಿಲ್ಲಿ-ಮೀರತ್ ನಡುವೆ ಸಂಚರಿಸಲಿರುವ ‘ನಮೋ ಭಾರತ್’
ಹೊಸದಿಲ್ಲಿ : ಭಾರತ ದೇಶದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು (ಆರ್‌ಆರ್‌ಟಿಎಸ್) ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ. ದಿಲ್ಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ನ 17 ಕಿಲೋಮೀಟರ್ ಉದ್ದದ ರೈಲು ಸೇವೆಯ ಮೊದಲ ಹಂತ ಸಿದ್ಧವಾಗಿದ್ದು, ಈ ರೈಲಿಗೆ ‘ನಮೋ ಭಾರತ್’ ಎಂದು ಹೆಸರಿಡಲಾಗಿದೆ.
30,274 ಕೋಟಿ ರೂ. ವೆಚ್ಚದಲ್ಲಿ ಆರಂಭವಾಗಿರುವ ಈ ಯೋಜನೆಯ ಕಾರಿಡಾರ್ 82 ಕಿಲೋಮೀಟರ್ ಉದ್ದವಿದ್ದು, ದಿಲ್ಲಿಯ ಸರಾಯ್ ಕಾಲೇ ಖಾನ್ ನಿಲ್ದಾಣದಿಂದ ಮೀರತ್‌ನ ಮೋದಿಪುರಂವರೆಗೆ ವಿಸ್ತರಿಸಲಿದೆ. ಮೇಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಮಾರ್ಗಕ್ಕೆ ಒಂದೂವರೆ ಗಂಟೆ ಮತ್ತು ಮೀರತ್ ಮತ್ತು ದಿಲ್ಲಿ ನಡುವೆ ಸ್ಥಳೀಯ ರೈಲಿನಲ್ಲಿ 2 ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಆದರೆ, ರಾಪಿಡ್ ಎಕ್ಸ್ ರೈಲು ಕೇವಲ 55-60 ನಿಮಿಷಗಳಲ್ಲಿ ದಿಲ್ಲಿಯಿಂದ ಮೀರತ್ಗೆ ತಲುಪುತ್ತದೆ.
ಮೊದಲ ಹಂತದಲ್ಲಿ ಈ ರಾಪಿಡ್ ರೈಲು ಸಾಹಿಬಾಬಾದ್, ಗಾಜಿಯಾಬಾದ್ ಗುಲ್ಧರ್, ದುಹೈ ಮತ್ತು ದುಹೈ ಡಿಪೋ ಸೇರಿದಂತೆ 5 ನಿಲ್ದಾಣಗಳ ನಡುವೆ ಸಂಚರಿಸಲಿದೆ. ಎನ್‌ಸಿಆರ್‌ನಲ್ಲಿ ಒಟ್ಟು 8 ಆರ್‌ಆರ್‌ಟಿಎಸ್ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ದಿಲ್ಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ಗೆ ಪ್ರಧಾನ ಮಂತ್ರಿ ಮೋದಿ 2019ರ ಮಾರ್ಚ್ 8ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.
ರಾಪಿಡ್ ರೈಲಿನಲ್ಲಿ ಸೀಟುಗಳು ಮತ್ತು ಕಿಟಕಿಗಳನ್ನು ಓರೆಯಾಗಿಸುವುದಲ್ಲದೆ, ಹೈಟೆಕ್ ಕೋಚ್‌ಗಳಲ್ಲಿ ಡಿಜಿಟಲ್ ಪರದೆಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಪ್ರಯಾಣಿಕರು ತಮ್ಮ ರೈಲು ಮಾರ್ಗವನ್ನು ಸುಲಭವಾಗಿ ಪರಿಶೀಲಿಸಬಹುದು. ಇದರೊಂದಿಗೆ ರೈಲು ಓಡುತ್ತಿರುವ ಈಗಿನ ವೇಗವನ್ನೂ ಡಿಜಿಟಲ್ ಪರದೆಯ ಮೇಲೆ ನೋಡಬಹುದು. ರಾಪಿಡ್ ರೈಲಿನಲ್ಲಿ ಶೇ.50ಕ್ಕಿಂತ ಹೆಚ್ಚು ಮಹಿಳಾ ಉದ್ಯೋಗಿಗಳಿರುತ್ತಾರೆ.
ದಿಲ್ಲಿ-ಗಾಜಿಯಾಬಾದ್-ಮೀರತ್ RRTS ಭಾರತದಲ್ಲಿ ಮೊದಲ ಹಂತದಲ್ಲಿ ಅನುಷ್ಠಾನಕ್ಕೆ ಯೋಜಿಸಲಾದ 3 ಕಾರಿಡಾರ್‌ಗಳಲ್ಲಿ ಮೊದಲನೆಯದು. ಇದರ ನಂತರ ದಿಲ್ಲಿ-ಗುರುಗ್ರಾಮ-ಎಸ್ಎನ್ಬಿ-ಅಲ್ವಾರ್ ಮತ್ತು ದಿಲ್ಲಿ-ಪಾಣಿಪತ್ ಕಾರಿಡಾರ್‌ಗಳು ಸಿದ್ಧವಾಗಲಿವೆ.
RRTS ರೈಲುಗಳು ಐಷರಾಮಿ ಕಾರುಗಳ ರೀತಿ ವಿಶಾಲವಾದ ಸೀಟುಗಳು, ಹೆಚ್ಚು ಲೆಗ್‌ರೂಮ್ ಮತ್ತು ಕೋಟ್ ಹ್ಯಾಂಗರ್‌ಗಳನ್ನು ಹೊಂದಿರುತ್ತದೆ. ಈ ರೈಲುಗಳಲ್ಲಿ ಲಗೇಜ್ ಕ್ಯಾರಿಯರ್‌ಗಳು, ಮಿನಿ ಸ್ಕ್ರೀನ್‌ಗಳು, ವೈ-ಫೈ, ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್ ಸೌಲಭ್ಯಗಳನ್ನು ಪ್ರತಿ ಸೀಟಿನಲ್ಲಿಯೂ ಅಳವಡಿಸಲಾಗಿದೆ. ರಾಪಿಡ್ಎಕ್ಸ್ ರೈಲು ಪ್ರೀಮಿಯಂ ಕೋಚ್ ಸೇರಿದಂತೆ 6 ಕೋಚ್‌ಗಳನ್ನು ಹೊಂದಿರುತ್ತದೆ. ಪ್ರತಿ ರೈಲಿನಲ್ಲಿ ಒಂದು ಕೋಚ್ ಅನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.















































































