ಕಾರ್ಕಳದ ಪ್ರವಾಸೋದ್ಯಮಕ್ಕೆ ಉದಯ ಶೆಟ್ಟಿ ಬಣದಿಂದ ಧಕ್ಕೆ – ಮಹಾವೀರ ಹೆಗ್ಡೆ ಟೀಕೆ

ಅಭಿವೃದ್ಧಿಯ ಅಣಕವೇ ನಿಮ್ಮ ಸಾಧನೆ

ಕಾರ್ಕಳ : ಕಾರ್ಕಳ ಕ್ಷೇತ್ರದ ಹಿತ ಕಾಪಾಡುತ್ತೇನೆ ಎಂದು ಚುನಾವಣೆ ಸಂದರ್ಭ ಹೇಳಿರುವ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಇದೀಗ ಕಾರ್ಕಳಕ್ಕೆ ಅಗೌರವ ತರುವ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆಯನ್ನುಂಟು ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಟೀಕಿಸಿದ್ದಾರೆ.
ವ್ಯಾಪಾರಿಗಳಿಗೆ, ಉದ್ಯೋಗಿಗಳಿಗೆ ತೊಂದರೆ ಕೊಡುವುದು, ಇತರರನ್ನು ಹಿಂಸಿಸುವುದು ನಿಮ್ಮ ಪ್ರವೃತ್ತಿಯಾಗಿದೆ. ಇದು ನಿಮ್ಮ ರಾಜಕಾರಣ ಭಾಗವೇ ? ಎಂದು ಪ್ರಶ್ನಿಸಿರುವ ಮಹಾವೀರ ಹೆಗ್ಡೆ ನಿಮ್ಮ ನಡವಳಿಕೆಯಿಂದ ನಿಮ್ಮ ಗೌರವ ಹೆಚ್ಚಾಯಿತೇ ? ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅಭಿವೃದ್ಧಿಯ ಅಣಕ ನಿಮ್ಮ ಸಾಧನೆ
ಚುನಾವಣೆ ಬಳಿಕ ಕಾರ್ಕಳದ ಅಭಿವೃದ್ಧಿಗೆ ನಿಮ್ಮ ಕೊಡುಗೆಯೇನು ? ಅಭಿವೃದ್ಧಿಯನ್ನು ಅಣಕವಾಡುವುದು ಅಭಿವೃದ್ಧಿಯ ವೇಗಕ್ಕೆ ತಡೆಯೊಡ್ಡುವುದು ನಿಮ್ಮ ಸಾಧನೆಯಾಗಿದೆ. ಮೌಲ್ಯಯುತ ರಾಜಕಾರಣ, ದ್ವೇಷರಹಿತ ರಾಜಕಾರಣಕ್ಕೆ ಸಾಕ್ಷಿಯಾಗಿದ್ದ ಕಾರ್ಕಳದಲ್ಲಿ ದ್ವೇಷದ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೀರಿ. ನಾಡಿಗೆ ಮುಖ್ಯಮಂತ್ರಿಯನ್ನು ನೀಡಿದ ಹಿರಿಮೆ ಕಾರ್ಕಳಕ್ಕಿದೆ. ಅಂದಿನಿಂದ ಇಂದಿನ ತನಕವೂ ಚುನಾವಣೆ ಸಂದರ್ಭ ಮಾತ್ರ ರಾಜಕೀಯ ಬೆಳವಣಿಗೆಗಳು ನಡೆದುಕೊಂಡು ಬಂದಿತ್ತು. ಆದರೆ ಇದೀಗ ನಿಮ್ಮ ಮೂಲಕ ಮತ್ತು ನಿಮ್ಮ ಬಣದ ಮೂಲಕ ನಿರಂತರವಾಗಿ ಗೊಂದಲ ಸೃಷ್ಟಿಸುವ ಕಾರ್ಯವಾಗುತ್ತಿದೆ ಎಂದು ಮಹಾವೀರ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಆಧಾರ ರಹಿತ ಟೀಕೆ
ಕಾರ್ಕಳದಲ್ಲಿ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಉದಯ ಶೆಟ್ಟಿ ಬಣದಿಂದ ಕೀಳು ಮಟ್ಟದ ರಾಜಕೀಯ ನಡೆಯುತ್ತಿದೆ. ಇದು ಪದೇ ಪದೆ ಸಾಬೀತಾಗುತ್ತಿದೆ. ಕಾರ್ಕಳಕ್ಕೆ ಕಳಂಕ ತರುವ ಕಾರ್ಯದಲ್ಲಿ ನಿರತರಾಗಿರುವ ಇಂತಹ ಮನಸ್ಥಿತಿಯವರ ಬಗ್ಗೆ ಕಾಂಗ್ರೆಸ್‌ನವರೇ ವಹಿಸಬೇಕು. ಇಂತಹ ನಾಟಕಗಳನ್ನು ನೈಜ ಕಾಂಗ್ರೆಸಿಗರು ಅರ್ಥ ಮಾಡಿಕೊಳ್ಳಬೇಕು ಎಂದು ಮಹಾವೀರ ಹೆಗ್ಡೆ ತಿಳಿಸಿದ್ದಾರೆ.

ಸ್ಮರಣೀಯ ಕಾರ್ಯ
ಶಾಸಕರಾಗಿ, ಸಚಿವರಾಗಿ ಸುನಿಲ್‌ ಕುಮಾರ್‌ ಅವರ ಕಾರ್ಯ ಸ್ಮರಣೀಯ. ಉದಯ ಶೆಟ್ಟಿ ಬಣ ಸುನಿಲ್‌ ಕುಮಾರ್‌ ಅವರ ಜನಪ್ರಿಯತೆಯನ್ನು ಹಾಳುಗೆಡವಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಅದರ ಬದಲು ಕಾರ್ಕಳಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಚನೆ ಮಾಡುವುದು ಒಳಿತು ಎಂದು ಪ್ರಕಟನೆಯಲ್ಲಿ ಮಹಾವೀರ ಹೆಗ್ಡೆ ತಿಳಿಸಿದ್ದಾರೆ.



























































































































error: Content is protected !!
Scroll to Top