ಕಾರ್ಕಳ : ಶ್ರೀ. ಕ್ಷೇ.ಧ.ಗ್ರಾ.ಯೋ. ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಹಾಗೂ ಜ್ಞಾನವಿಕಾಸ ಮಹಿಳಾ ಘಟಕದ ಸಹಯೋಗದಲ್ಲಿ ಅ. 2ರಂದು ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ನಡೆಯಿತು.
ಮಾಜಿ ಸಚಿವ ಅಭಯಚಂದ್ರ ಜೈನ್ ದೀಪ ಬೆಳಗಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ನವಜೀವನ ಸಮಿತಿ ಮುಖಾಂತರ ಸಾವಿರಾರು ಕುಟುಂಬಗಳ ಕಣ್ಣೀರು ಒರೆಸಿದ್ದಾರೆ ಎಂದರು.
ಅನೇಕ ರಾಷ್ಟ್ರಗಳಿಗೆ ಪ್ರೇರಣೆ
ಸತ್ಯ, ಅಹಿಂಸಾ ತತ್ವ ಪ್ರತಿಪಾದನೆಯೊಂದಿಗೆ ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿ ರಾಷ್ಟ್ರಪಿತನೆನಿಸಿಕೊಂಡವರು ಮಹಾತ್ಮ ಗಾಂಧಿ. ಅವರ ಈ ಹೋರಾಟವು ಸಂಪೂರ್ಣವಾಗಿ ಅಹಿಂಸಾತ್ಮಕವಾಗಿತ್ತು ಮತ್ತು ವಿಶ್ವದ ಅನೇಕ ರಾಷ್ಟ್ರಗಳ ಸ್ವಾತಂತ್ರ್ಯಕ್ಕೆ ಪ್ರೇರಣೆಯಾಗಿತ್ತು ಎಂದು ಅಭಯಚಂದ್ರ ಜೈನ್ ಹೇಳಿದರು.
ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಮದ್ಯ ತ್ಯಜಿಸಿರುವ ಜಯನಂದ್ ವಾಲ್ಪಾಡಿ ಮಾತನಾಡಿ, ಕುಡಿತ ಬಿಟ್ಟ ಪರಿಣಾಮ ನನ್ನ ಕುಟುಂಬದ ಅಭ್ಯುದಯವಾಗಿದೆ. ಕೃಷಿ ಅಭಿವೃದ್ಧಿ, ಹೈನುಗಾರಿಕೆ ನಡೆಸಿಕೊಂಡು ಇದೀಗ ನೆಮ್ಮದಿಯ ಜೀವನ ಸಾಗಿಸುವಂತಾಗಿದೆ. ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯೇ ಕಾರಣವೆಂದರು.
ನನ್ನ ಗಂಡ ಶಿಬಿರದಲ್ಲಿ ಭಾಗವಹಿಸಿ ಬಳಿಕ ಕುಡಿತವನ್ನು ಬಿಟ್ಟುಬಿಟ್ಟರು. ಅನಂತರ ನಮ್ಮ ಬದುಕು ಬದಲಾಯಿತು. ನಮ್ಮದು ಇದೀಗ ಸುಖಿ ಕುಟುಂಬ. ಇದಕ್ಕೆ ಮೂಲ ಕಾರಣ ಧರ್ಮಸ್ಥಳದ ಯೋಜನೆಯೆಂದು ಸುಮತಿ ಕೇಶವ್ ಅಭಿಪ್ರಾಯಪಟ್ಟರು.

ಶ್ರೀ. ಕ್ಷೇ.ಧ.ಗ್ರಾ.ಯೋ. ಬಿ.ಸಿ. ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಎಸ್. ಎಸ್. ಆಶಯ ನುಡಿಗಳನ್ನಾಡಿ, ಡಾ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗಾಂಧೀ ತತ್ವಗಳನ್ನು ಜಾರಿಗೆ ತರುತ್ತಿದ್ದಾರೆ. ತನ್ಮೂಲಕ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗುತ್ತಿದೆ ಎಂದರು.
ಸನ್ಮಾನ
ಶೌರ್ಯ ಘಟಕದ ಕ್ಯಾಪ್ಟನ್ ನವೀನ್ ಬಜಗೋಳಿ ಅವರ ಸೇವಾ ಕಾರ್ಯವನ್ನು ಗುರುತಿಸಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಕಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮೂಡಬಿದ್ರೆ ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಹೆಬ್ರಿ ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ಸಮಿತಿ ಸದಸ್ಯರಾದ ಮಹಾವೀರ್ ಜೈನ್, ಕಮಲಾಕ್ಷ ನಾಯಕ್, ಹರಿಶ್ಚಂದ್ರ ತೆಂಡೂಲ್ಕರ್, ತ್ರಿವಿಕ್ರಮ ಕಿಣಿ, ಹಿರಿಯ ನ್ಯಾಯವಾದಿ ಬಾಹುಬಲಿ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಕಳ ಯೋಜನಾಧಿಕಾರಿ ಹೇಮಲತಾ ಸ್ವಾಗತಿಸಿದರು. ಮೇಲ್ವಿಚಾರಕರಾದ ಸೌಮ್ಯ ಶೆಟ್ಟಿ, ಮಮತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಮೂಡಬಿದ್ರೆ ಯೋಜನಾಧಿಕಾರಿ ಸುನಿತಾ ನಾಯಕ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜ್ಞಾನ ವಿಕಾಸದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ನಿರೂಪಿಸಿದರು.









































