ಬರಪೀಡಿತ ಪ್ರದೇಶವನ್ನಾಗಿ ಘೋಷಿಸುವಂತೆ ತಹಶೀಲ್ದಾರರಿಗೆ ಮನವಿ
ಹೆಬ್ರಿ : ಹೆಬ್ರಿ ತಾಲೂಕಿನಾದ್ಯಂತ ಈ ಬಾರಿ ಶೇ. 90 ರಷ್ಟು ಬಿತ್ತನೆಯಾಗಿದೆ. ಆದರೆ, ಶೇ. 70 ರಷ್ಟು ಮಳೆಯ ಕೊರೆತೆ ಉಂಟಾಗಿದೆ. ಇದರಿಂದಾಗಿ ಕೃಷಿ ಭೂಮಿಗೆ ನೀರಿನ ಅಭಾವ ಉಂಟಾಗಿ ಬೆಳೆದ ಬೆಳೆಗಳು ಒಣಗುತ್ತಿವೆ. ಹೀಗೆ ಮುಂದುವರಿದಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿ ದಿನನಿತ್ಯದ ಚಟುವಟಿಕೆಗಳಿಗೆ ನೀರಿಗಾಗಿ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ತಾಲೂಕನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಿಸುವಂತೆ ರಾಜ್ಯ ಸರಕಾರಕ್ಕೆ ತಹಶೀಲ್ದಾರರ ಮೂಲಕ ಸಾರ್ವಜನಿಕರು ಸೆ. 15 ರಂದು ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಸರಕಾರ ಇತ್ತೀಚೆಗೆ ಬರಪೀಡಿತ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಹೆಬ್ರಿ ತಾಲೂಕಿನ ಹೆಸರು ಸೇರ್ಪಡೆ ಮಾಡಿರುವುದಿಲ್ಲ. ಆದರೆ, ಹೆಬ್ರಿ ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಶೀಘ್ರವೇ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಸಾರ್ವಜನಿಕರು ಮನವಿಯಲ್ಲಿ ಆಗ್ರಹಿಸಿದ್ದಾರೆ.