ಧಾರವಾಡ : ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ಧಾರವಾಡ ಹೈಕೋರ್ಟ್ ಗಣೇಶ ಪ್ರತಿಷ್ಠಾಪನೆ ಮಾಡಲು ಅಸ್ತು ಎಂದಿದೆ.
ಗಣೇಶೋತ್ಸವ ಕುರಿತು ಮಹಾನಗರ ಪಾಲಿಕೆ ಕೈಗೊಂಡ ನಿರ್ಣಯವನ್ನು ಹುಬ್ಬಳ್ಳಿಯ ಅಂಜುಮನ ಇಸ್ಲಾಂ ಸಂಸ್ಥೆಯವರು ಧಾರವಾಡ ಹೈಕೋರ್ಟ್ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಈ ಮೇಲ್ಮನವಿಯನ್ನು ತಿರಸ್ಕರಿಸಿದೆ.
ನ್ಯಾ. ಸಚಿನ ಮಗದುಮ್ಮ ಅವರಿದ್ದ ಏಕಸದಸ್ಯ ಪೀಠವು ಈ ತೀರ್ಪು ನೀಡಿದ್ದು, ಈ ಮೂಲಕ ಎರಡನೇ ವರ್ಷವು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಯಲಿದೆ. ಗಣೇಶನ ಪ್ರತಿಷ್ಠಾಪನೆಗೆ ಇದೀಗ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಮಹಾನಗರ ಪಾಲಿಕೆ ಠರಾವು ಅನುಮೋದಿಸುವ ಮೂಲಕ ಸ್ಥಳಿಯ ಗಣೇಶೋತ್ಸವದ ಸಮಿತಿಗೆ ಬಹುನಿರೀಕ್ಷಿತ ಗೆಲುವು ಸಿಕ್ಕಂತಾಯಿತು.

ಗಣೇಶ ಪ್ರತಿಷ್ಠಾಪನೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮಾಜಿ ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಅನೇಕರು ಕಳೆದ ಎರಡು ದಿನದಿಂದ ಹು-ಧಾ ಮಹಾನಗರ ಪಾಲಿಕೆ ಎದುರು ಹಗಲಿರುಳು ಪ್ರತಿಭಟನೆ ನಡೆಸಿದ್ದರು.



























