ಆಯುರ್ವೇದ ಎಂದು ಹೇಳಿದ ತಕ್ಷಣ ನೆನಪು ಬರುವುದು ಪಂಚಕರ್ಮ. ಏನಿದು ಪಂಚಕರ್ಮ, ಇದರ ಬಗ್ಗೆ ತಿಳಿದುಕೊಳ್ಳೋಣ. ಪಂಚ ಅಂದರೆ ಐದು, ಕರ್ಮ ಎಂದರೆ ಚಿಕಿತ್ಸಾ ವಿಧಗಳು. ವಮನ, ವಿರೇಚನ, ಬಸ್ತಿ, ನಸ್ಯ ಹಾಗೂ ರಕ್ತ ಮೋಕ್ಷಣ ಪಂಚ ಕರ್ಮಗಳಾಗಿದೆ. ಆಯುರ್ವೇದದ ಮುಖ್ಯ ಗುರಿ ಸ್ವಾಸ್ಥ್ಯ ರಕ್ಷಣೆ ಹಾಗೂ ಅನಾರೋಗ್ಯವನ್ನು ಹೋಗಲಾಡಿಸುವುದು. ಆರೋಗ್ಯದಿಂದಿರಲು ಈ ಪಂಚಕರ್ಮ ಸಹಾಯ ಮಾಡುತ್ತದೆ.
ಪಂಚಕರ್ಮ ಮಾಡಿಸುವುದರಿಂದ ಆಗುವ ಲಾಭಗಳು-
ಪಂಚಕರ್ಮವು ಸ್ವಾಸ್ಥ್ಯ ರಕ್ಷಣೆಯ ಮಾಡುವುದಲ್ಲದೆ ರೋಗಿಯ ರೋಗವನ್ನು ಗುಣಪಡಿಸುತ್ತದೆ.
ವಾತ ಪಿತ್ತ ಕಫ ದೋಷವನ್ನು ಸಮತೋಲನದಲ್ಲಿಡಲು ಹಾಗೂ ಸಪ್ತ ಧಾತುಗಳಿಗೆ( ರಸ, ರಕ್ತ, ಮಾಂಸ, ಮೇಧ, ಅಸ್ತಿ, ಮಜ್ಜಾ, ಶುಕ್ರ) ಪೋಷಣೆ ನೀಡುತ್ತದೆ.
ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಾಯಮಾಡುತ್ತದೆ ಹಾಗೂ ದೇಹದ ಶುದ್ಧಿ ಮಾಡುತ್ತದೆ.
ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ.
ಜೀರ್ಣಕ್ರಿಯೆ ಹಾಗೂ ಚಯಾಪಚಯ ಕ್ರಿಯೆಯನ್ನು ಸರಿಪಡಿಸುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪಂಚ ಕರ್ಮಗಳು ಹೀಗಿವೆ-
ಪಂಚಕರ್ಮ ಮಾಡುವ ಮೊದಲು ನಮ್ಮ ಶರೀರವನ್ನು ತಯಾರಿಸಲು ಪೂರ್ವ ಕರ್ಮ ಮಾಡುತ್ತಾರೆ. ಪೂರ್ವ ಕರ್ಮದಲ್ಲಿ ದೀಪನ ಪಾಚನ ಔಷಧವನ್ನು ಕೆಲವು ದಿನಗಳ ಕಾಲ ನೀಡಿ ನಂತರ ಸ್ನೇಹಪನ ಅಂದರೆ ಔಷಧಿಯುಕ್ತ ತುಪ್ಪವನ್ನು ನೀಡಿ ತದನಂತರ ಅಭ್ಯಂಗ ಸ್ವೇದನವನ್ನು ಮಾಡುತ್ತಾರೆ. ತದನಂತರ ರೋಗಿಯ ದೇಹ ಪಂಚಕರ್ಮಕ್ಕೆ ಸಿದ್ಧವಾದಾಗ ಪಂಚಕರ್ಮ ಮಾಡಿಸಲಾಗುತ್ತದೆ.
ಪ್ರಧಾನ ಕರ್ಮ ಅಂದರೆ ಯಾವುದಾದರು ಒಂದು ಚಿಕಿತ್ಸಾ ವಿಧಾನವನ್ನು ಮಾಡಲಾಗುವುದು. ಎಲ್ಲಾ ಐದು ಕರ್ಮಗಳನ್ನು ಒಟ್ಟಿಗೆ ಮಾಡಿಸುವುದಿಲ್ಲಾ..
ವಮನ ಕರ್ಮ – ಇದರಲ್ಲಿ ಔಷಧವನ್ನು ನೀಡಿ ವಾಂತಿ ಮಾಡಿಸುವುದು. ಇದು ಕಫ ವಿಕಾರಗಳಲ್ಲಿ ಮಾಡಿಸಲಾಗುವುದು. ಉದಾಹರಣೆಗೆ ತ್ವಚೆಯ ವಿಕಾರ, ಶ್ವಾಸದ ವಿಕಾರಗಳಲ್ಲಿ ಮಾಡಲಾಗುವುದು.
ವಿರೇಚನ ಕರ್ಮ– ಔಷಧವನ್ನು ನೀಡಿ ಭೇದಿ ಮಾಡಿಸುವುದು. ಇದು ಪಿತ್ತರೋಗಗಳಲ್ಲಿ ಉಪಯುಕ್ತ. ಉದಾಹರಣೆಗೆ ತ್ವಚೆಯ ರೋಗಗಳು, ಯಕೃತ್ ಸಮಸ್ಯೆಗಳು.
ಬಸ್ತಿ ಚಿಕಿತ್ಸೆ ಕರ್ಮ- ಇದರಲ್ಲಿ ಎನೆಮಾ ಎಂದರೆ ಗುದದ್ವಾರದ ಮೂಲಕ ಔಷಧಿ ನೀಡುವುದು. ಇದು ಕರುಳನ್ನು ಶುದ್ಧೀಕರಿಸುತ್ತದೆ. ವಾತ ದೋಷದ ವಿಕಾರಗಳಲ್ಲಿ ಇದನ್ನು ಮಾಡಲಾಗುವುದು.
ನಸ್ಯ ಕರ್ಮ – ಮೂಗಿಗೆ ಔಷದ ನೀಡುವುದು. ಇದು ಕುತ್ತಿಗೆ ಹಾಗೂ ಶಿರದಲ್ಲಿರುವ ಅಂಗಗಳ ರೋಗಗಳಲ್ಲಿ ಉಪಯುಕ್ತ. ಉದಾಹರಣೆಗೆ ಸೈನ ಸೈಟಿಸ್ ತಲೆನೋವು. ಮಾನಸಿಕ ವಿಕಾರಗಳಲ್ಲಿಯೂ ಕೂಡ ಮಾಡಿಸಲಾಗುವುದು.
ರಕ್ತ ಮೋಕ್ಷಣ- ಜಿಗಣಿ ಅಥವಾ ವಿವಿಧ ವಿಧಾನಗಳಿಂದ ರಕ್ತವನ್ನು ತೆಗೆಯುವ ವಿಧಾನ. ಇದರಿಂದ ಅಶುದ್ಧ ರಕ್ತವು ಹೊರಹಾಕಲಾಗುವುದು. ಇದರಿಂದ ರಕ್ತ ಶುದ್ಧವಾಗುತ್ತದೆ. ಇದನ್ನು ರಕ್ತ ವಿಕಾರಗಳಲ್ಲಿ ಉಪಯೋಗಿಸುತ್ತಾರೆ.
ಹೀಗೆ ಶರೀರವೆಂಬ ಇಂಧನವನ್ನು ಸರಿಯಾಗಿ ಕಾರ್ಯನಿರ್ವಹಿಸಲು ಪಂಚಕರ್ಮ ಸಹಾಯ ಮಾಡುತ್ತದೆ.
