ಹೆಬ್ರಿ : ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 321.57 ಕೋಟಿ ವ್ಯವಹಾರ ನಡೆಸಿ 1.62 ಕೋಟಿ ರೂಪಾಯಿ ವಾರ್ಷಿಕ ಲಾಭಗಳಿಸಿದೆ. ಸಂಘದ ಲಾಭದ ವಿಂಗಡನೆಯ ಪೂರ್ವದಲ್ಲಿ 1 ಕೋಟಿ ರೂಪಾಯಿಯನ್ನು ಪ್ರಧಾನ ಕಚೇರಿಯ ಕಟ್ಟಡಕ್ಕೆ ನಿವೇಶನ ಖರೀದಿಸಲು ಮುಂಗಡ ನೀಡಲಾಗಿದೆ ಎಂದು ಅಧ್ಯಕ್ಷ ಭೂತುಗುಂಡಿ ಕರುಣಾಕರ ಶೆಟ್ಟಿ ಹೇಳಿದರು.
ಅವರು ಸೆ. 12 ರಂದು ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘಕ್ಕೆ 2023-24ನೇ ಸಾಲಿನಲ್ಲಿ 4.27 ಕೋಟಿ ರೂ.ಗೆ ಸಂಘಕ್ಕೆ ನಿವೇಶನ ಖರೀದಿ ಮಾಡಲಾಗಿದೆ. 9703 ಎ ತರಗತಿಯ ಸದಸ್ಯರನ್ನು ಹೊಂದಿರುವ ಬ್ಯಾಂಕ್ 2.99 ಕೋ. ರೂ. ಪಾಲು ಬಂಡವಾಳ ಸಂಗ್ರಹಿಸಿದೆ. ವರ್ಷದ ಅಂತ್ಯಕ್ಕೆ 59.84 ಕೋ. ರೂ. ಠೇವಣಿ ಸಂಗ್ರಹಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 50.86 ಕೋ. ರೂ. ಸಾಲ ನೀಡಿದ್ದು 93% ಸಾಲ ವಸೂಲಿಯ ಪ್ರಗತಿ ಸಾಧಿಸಿದೆ. ಸದಸ್ಯರ ಹೊರಬಾಕಿ ಸಾಲ 61.24 ಕೋ. ರೂ. ಇದ್ದು ಸಂಘದ ದುಡಿಯುವ ಬಂಡವಾಳ 86.53 ಕೋ. ರೂ. ಆಗಿರುತ್ತದೆ ಎಂದು ತಿಳಿಸಿದರು.
ಸಂಘವು ಸದಸ್ಯರಿಗೆ ಕೃಷಿ ಕೃಷಿಯೇತರ ಉದ್ದೇಶಗಳಿಗೆ, ಸರಕಾರದ ಸಾಲ ಸಹಿತ ಎಲ್ಲಾ ತರದ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಶೂನ್ಯ ಬಡ್ಡಿಯ ಯೋಜನೆಯಲ್ಲಿ 23.02 ಕೋ. ರೂ. ಸಾಲ ವಿತರಿಸಿದ್ದು 23.44 ಕೋ. ರೂ. ಸಾಲ ಹೊರ ಬಾಕಿ ಇರುತ್ತದೆ. ರಾಜ್ಯ ಸರಕಾರದ ಡೈರಿ ಕಿಸಾನ್ ಕ್ರೆಡಿಟ್ ಕಾರ್ಡು ಸಾಲ 79.14 ಲ. ರೂ. ನೀಡಲಾಗಿದೆ. 3% ಬಡ್ಡಿಯಲ್ಲಿ 3.58 ಕೋ ರೂ. ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದೆ. ಸರಕಾರದ ಭೂ ಸಮೃದ್ಧಿ ಯೋಜನೆ, ಪಶು ಭಾಗ್ಯ ಯೋಜನೆ, ಗಿರಿಜನ ಉಪಯೋಜನೆಯಲ್ಲಿ ಸೌಲಭ್ಯ ನೀಡಲಾಗಿದೆ. 1165 ಮಂದಿ ಸದಸ್ಯರ ಕುಟುಂಬವನ್ನು ಯಶಸ್ವಿನಿ ಯೋಜನೆಯಲ್ಲಿ ನೊಂದಾಯಿಸಿ ಸದಸ್ಯರ ಕಲ್ಯಾಣನಿಧಿಯಲ್ಲಿ 1 ಲ. ರೂ. ಸಹಾಯಧನ ನೀಡಿದೆ ಎಂದರು.
ನವೋದಯ ಸ್ವಸಹಾಯ ಸಂಘ, ಸ್ತ್ರೀಶಕ್ತಿ ಗುಂಪು ಸಹಿತ ಇತರ 346 ಸ್ವಸಹಾಯ ಸಂಘಗಳ ಖಾತೆಯನ್ನು ನಿರ್ವಹಿಸಿ 57.60 ಲ.ರೂ. ಸಾಲ ವಿತರಿಸಲಾಗಿದೆ. ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಪಡಿತರ ಸಾಮಗ್ರಿಗಳ ವಿತರಣೆ, ರಾಸಾಯನಿಕ ಗೊಬ್ಬರ, ಕೀಟನಾಶಕ ಮಾರಾಟದಲ್ಲಿ 51.51 ಲಕ್ಷ ವ್ಯವಹಾರವನ್ನು ಮಾಡಲಾಗಿದೆ. ಸಾಲಗಾರ ಸದಸ್ಯರ ಅನುಕೂಲಕ್ಕಾಗಿ ವೈಯಕ್ತಿಕ ಗುಂಪು ಅಪಘಾತ ವಿಮೆ ಯೋಜನೆಯಡಿ 2531 ಸದಸ್ಯರನ್ನು ನೊಂದಾಯಿಸಲಾಗಿದೆ. ಬ್ಯಾಂಕಿನ ಲೆಕ್ಕಪತ್ರವನ್ನು ಕನ್ನಡದಲ್ಲಿ ಗಣಕೀಕರಣಗೊಳಿಸಲಾಗಿದೆ. ಭದ್ರತಾ ಕೋಶಗಳ ಸವಲತ್ತು, ರೈತರಿಗೆ ಅನುಕೂಲಕ್ಕಾಗಿ ಕಡಿಮೆ ಬಾಡಿಗೆಯಲ್ಲಿ ಟ್ರಾಕ್ಟರ್ ಒದಗಿಸಲಾಗುತ್ತಿದೆ ಎಂದು ಕರುಣಾಕರ ಶೆಟ್ಟಿ ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೀನ ನಾಯ್ಕ್, ಉಪಾಧ್ಯಕ್ಷೆ ಸುಮಿತ್ರ ಹೆಗ್ಡೆ, ನಿರ್ದೇಶಕರಾದ ನವೀನ್ ಕೆ. ಅಡ್ಯಂತಾಯ, ಅಮೃತ್ ಕುಮಾರ್ ಹೆಗ್ಡೆ, ಸುಧಾಕರ ಹೆಗ್ಡೆ, ಭೋಜ ಪೂಜಾರಿ, ಗಣೇಶ್ ಕುಮಾರ್, ಸುಧಾ ಜಿ. ನಾಯಕ್, ಸುರೇಶ ಭಂಡಾರಿ, ಬಸವ ನಾಯ್ಕ್, ವಸಂತ ನಾಯ್ಕ್ ಉಪಸ್ಥಿತರಿದ್ದರು.