ಹೆಬ್ರಿ : ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ರೋವರ್ಸ್ ರೇಂಜರ್ಸ್ , ಜೆ.ಸಿ.ಐ ಹೆಬ್ರಿ, ನಕ್ಸಲ್ ನಿಗ್ರಹ ಪಡೆ ಹೆಬ್ರಿ, ಉಡುಪಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಹೆಚ್. ಡಿ. ಎಫ್. ಸಿ. ಬ್ಯಾಂಕ್, ಸರಕಾರಿ ನೌಕರರ ಸಂಘ ಹೆಬ್ರಿ ಘಟಕ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘ ಹೆಬ್ರಿ ಘಟಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ಘಟಕದ ಸಂಯುಕ್ತ ಆಶ್ರಯದಲ್ಲಿ ಜೆ.ಸಿ.ಐ ಸಪ್ತಾಹ ಅಂಗವಾಗಿ ಸೆ. 13 ರಂದು ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಿತು.
ಹೆಬ್ರಿ ಗ್ರಾಮೀಣ ರೋಟರಿ ದಳದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಕ್ತದಾನ ಸೇವೆ ಎನ್ನುವ ನೆಲೆಗಟ್ಟಿನಲ್ಲಿ ಮಾಡಬಹುದಾದ ಅತಿ ದೊಡ್ಡ ದಾನ. ವಿದ್ಯಾರ್ಥಿ ಜೀವನದಲ್ಲೇ ಇಂತಹ ಸೇವಾ ಕಾರ್ಯಗಳನ್ನು ಮೈಗೂಡಿಸಿಕೊಂಡು ಇತರರಿಗೂ ಸ್ಫೂರ್ತಿಯಾಗಬೇಕು ಎಂದರು. ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಸಾಲಿಯಾನ್ ಮಣಿಪಾಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಕ್ತದ ತೀವ್ರ ಕೊರತೆ ಉಂಟಾಗುತ್ತಿದ್ದು, ಅದನ್ನು ನೀಗಿಸುವಲ್ಲಿ ದಾನಿಗಳ ಪಾತ್ರ ಮಹತ್ವದ್ದಾಗಿದೆ. ಒಂದು ಯೂನಿಟ್ ರಕ್ತದಿಂದ ಮೂರು ಜನರ ಜೀವ ಉಳಿಸಬಹುದು ಎಂದರು.
ಕಾಲೇಜು ಪ್ರಾಂಶುಪಾಲ ಡಾ. ವಿಷ್ಣುಮೂರ್ತಿ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹೆಬ್ರಿ ಘಟಕದ ಅಧ್ಯಕ್ಷ ಹರೀಶ್ ಪೂಜಾರಿ, ನಕ್ಸಲ್ ನಿಗ್ರಹ ಪಡೆಯ ರಾಘವೇಂದ್ರ, ಜೆ.ಸಿ. ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿ ಡಾ. ಪ್ರವೀಣ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ, ಜೆ.ಸಿ.ಐ. ನಿಕಟ ಪೂರ್ವ ಅಧ್ಯಕ್ಷ ಪ್ರಸಾದ್ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಬಾಲರಾಜ್, ಡಿ. ಬಿ., ಕೆ.ಎಂ.ಸಿ. ರಕ್ತ ನಿಧಿ ವಿಭಾಗದ ಡಾ. ಅನ್ಸಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಂದನಾ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ ಒಟ್ಟು 101 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
