ಶ್ರೀಮದ್‌ ಭುವನೇಂದ್ರ ಪ್ರೌಢಶಾಲೆಯಲ್ಲಿ ದಾನಿಗಳ ದಿನಾಚರಣೆ

ಹೆತ್ತವರು ಮತ್ತು ಶಿಕ್ಷಕರ ಮಾರ್ಗದರ್ಶನವೇ ಜೀವನ ಸಾಧನೆಗೆ ಸ್ಫೂರ್ತಿ – ಕೆ. ಕಮಲಾಕ್ಷ ಕಾಮತ್

ಕಾರ್ಕಳ : ನಮ್ಮ ಜೀವನದಲ್ಲಿ ಕಾಣುವ ಶ್ರೇಷ್ಠ ಮಾರ್ಗದರ್ಶಕರೆಂದರೆ ಹೆತ್ತವರು ಹಾಗೂ ಶಿಕ್ಷಕರು. ಇವರೀರ್ವರ ಆಶೀರ್ವಾದ ಪಡೆದ ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಹೊರಹೊಮ್ಮುವನು ಎಂದು ನಿವೃತ್ತ ಲೆಕ್ಕಪರಿಶೋಧಕ ಕೆ. ಕಮಲಾಕ್ಷ ಅಭಿಪ್ರಾಯಪಟ್ಟರು.

ಅವರು ಸೆ. 12 ರಂದು ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ವರದೇಂದ್ರ ಸದನದಲ್ಲಿ ಎಸ್‌. ವಿ. ಎಸ್‌. ವಿ. ಫಂಡ್‌ನ ಸಹಯೋಗದಲ್ಲಿ ಜರುಗಿದ ದಾನಿಗಳ ದಿನಾಚರಣೆ, ಎಸ್ಸೆಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿಯ ಸಾಧಕ ವಿದ್ಯಾರ್ಥಿಗಳ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಜೀವನದಲ್ಲಿ ಬಾಲ್ಯ ಅಮೂಲ್ಯವಾದ ಕಾಲಘಟ್ಟ. ಈ ಸಂದರ್ಭ ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಬದುಕನ್ನು ಸ್ವೀಕರಿಸಿ ಭವಿಷ್ಯದ ಜೀವನಕ್ಕೆ ಒಳ್ಳೆಯ ಅಡಿಪಾಯವನ್ನು ಹಾಕಿಕೊಳ್ಳಬೇಕು. ಕಲಿಕೆಯ ಸಮಯದಲ್ಲಿ ಸಾಧನೆಯು ನಿರಂತರವಾಗಿ ಮುಂದುವರಿಯುತ್ತಿರಬೇಕು. ಪ್ರಸ್ತುತ ಆಧುನಿಕ ಯುಗದಲ್ಲಿ ನಾವಿದ್ದೇವೆ ಎಂಬ ಅರಿವನ್ನು ಹೊಂದಿ ಸ್ಪರ್ಧಾತ್ಮಕ ಜಗತ್ತಿಗೆ ನಾವು ತೆರೆದುಕೊಳ್ಳಬೇಕು ಎಂದರು.

ಸಂಸ್ಥೆಯಲ್ಲಿ ಪ್ರತೀ ವರ್ಷದಂತೆ ಶ್ರಾವಣ ಮಾಸ ಕೃಷ್ಣ ಪಕ್ಷ ದ್ವಾದಶೀ ತಿಥಿಯಂದು ನಡೆಸುವ ದಾನಿಗಳ ದಿನಾಚರಣೆಯ ಕಾರ್ಯಕ್ರಮವನ್ನು ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಹಿರಿಯರಾದ ಕುಕ್ಕುಂದೂರು ದಿವಂಗತ ಅನಂತ ಪದ್ಮನಾಭ ಕಾಮತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ದಾನಿಗಳನ್ನು ಸ್ಮರಿಸಲಾಯಿತು. ಇದೇ ಸಂದರ್ಭ ಕಳೆದ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತರಗತಿವಾರು ವಿದ್ಯಾರ್ಥಿ ವೇತನ ಹಾಗೂ ಪ್ರಥಮ ಭಾಷೆ ಸಂಸ್ಕೃತದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಸ್ತಾಂತರಿಸಲಾಯಿತು. ಹಿರಿಯ ಶಿಕ್ಷಕ ಆರ್. ನಾರಾಯಣ ಶೆಣೈ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು.

ಸಂಸ್ಥೆಯ ಸಂಚಾಲಕ ನರೇಂದ್ರ ಕಾಮತ್ ಕೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್‌. ವಿ. ಎಸ್‌. ವಿ. ಫಂಡ್‌ನ ಸದಸ್ಯರಾದ ರಾಮಚಂದ್ರ ನಾಯಕ್, ಎರ್ಮಾಳ್ ಮೋಹನ್ ಶೆಣೈ, ಎಸ್. ನಿತ್ಯಾನಂದ ಪೈ, ಜ್ಯೋತಿ ಜೆ. ಪೈ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಕಿಣಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವೃಂದಾ ಶೆಣೈಯವರು ಸ್ವಾಗತಿಸಿ, ಶಿಕ್ಷಕರಾದ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿ, ನಯನಾ ಶೆಣೈ ವಂದಿಸಿದರು.

error: Content is protected !!
Scroll to Top