ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ – ಟ್ವೀಟ್ ಮೂಲಕ ಬಿಜೆಪಿ ತಿರುಗೇಟು
ಕಾರ್ಕಳ : ಪ್ರಧಾನಿ ನರೇಂದ್ರ ಮೋದಿಯವರು ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಇಂದು ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭ ರಾಜ್ಯದ ಯಾವುದೇ ಬಿಜೆಪಿ ನಾಯಕರು ಜನಸಾಮಾನ್ಯರಂತೆ ಅವರ ರೋಡ್ ಶೋದಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ಕಾಂಗ್ರೇಸಿಗರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಟೀಕೆಗೆ ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕವೇ ಖಾರವಾಗಿ ಪ್ರತಿಕ್ರಿಯಿಸಿದೆ.
ಈ ಕುರಿತು ಟ್ವಿಟ್ಟರ್ ಪೇಜ್ನಲ್ಲಿ ಬರೆದುಕೊಂಡಿರುವ ಬಿಜೆಪಿ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದು ಚಂದ್ರಯಾನದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ. ಆದಾಗ್ಯೂ ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು ಹುಡುಕಲೆತ್ನಿಸಿರುವ ನಿಮಗೆ ಕಾಮಾಲೆಯಂತೆ ಏನೋ ಕಾಯಿಲೆ ಇರಬಹುದು!

ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ ಎಂಬಂತೆ ಗಾಂಧಿ ಕುಟುಂಬದ ಜೀತಕ್ಕೆ ಬಿದ್ದವರಂತೆ ಸೇವೆ ಮಾಡುವ ಕಾಂಗ್ರೆಸ್ಸಿಗರಿಗೆ ಪ್ರಧಾನಮಂತ್ರಿಗಳ ಅಧಿಕೃತ ಸರಕಾರಿ ಭೇಟಿಗೂ, ಅನೌಪಚಾರಿಕ ಭೇಟಿಗೂ ವ್ಯತ್ಯಾಸ ತಿಳಿದಿಲ್ಲ. ತಮ್ಮ ಮೋಜಿಗಾಗಿ ಲಕ್ಷದ್ವೀಪಕ್ಕೆ ತೆರಳಲು ಸೇನಾ ನೌಕೆ ಬಳಸುತ್ತಿದ್ದವರು ಬಿಟ್ಟು ಹೋದ ಸಂಸ್ಕಾರದಲ್ಲಿ ಬೆಳೆದವರಿಗೆ ಇವು ಅರ್ಥ ಆಗದು. ಅಂದ ಹಾಗೆ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ ‘ಗಾಂಧಿ’ ಕುಟುಂಬ ಕೊಟ್ಟಿರುವ ಮರ್ಯಾದೆಯನ್ನು ಕರ್ನಾಟಕ ನೋಡಿದೆ! ಎಂದು ಕಾಂಗ್ರೇಸಿಗರು ಮಾಡಿದ ಟ್ರೋಲ್ಗೆ ತಿರುಗೇಟು ನೀಡಿದೆ.
ಟ್ವೀಟ್ ಹಂಚಿಕೊಂಡ ಸುನಿಲ್ ಕುಮಾರ್
ಬಿಜೆಪಿ ಕರ್ನಾಟಕ ಅನ್ನುವಂತಹ ಟ್ವಿಟ್ಟರ್ ಪೇಜ್ನಲ್ಲಿ ಶೇರ್ ಆಗಿರುವ ಈ ಟ್ವೀಟ್ ಅನ್ನು ಮಾಜಿ ಸಚಿವ, ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ತಮ್ಮ ಟ್ವಿಟ್ಟರ್ ಪೇಜ್ನಲ್ಲಿ ಗ್ರೋ ಅಪ್ (Grow Up) ಎಂದು ಕಾಂಗ್ರೆಸ್ ಟ್ವಿಟ್ಟರ್ ಪೇಜನ್ನು ಟ್ಯಾಗ್ ಮಾಡಿ ಹಂಚಿಕೊಂಡಿದ್ದಾರೆ.







































