ದೇಶದಾದ್ಯಂತ ಮೂರು ಲಕ್ಷ ರೂ.ಗಳಿಗಿಂತ ಜಾಸ್ತಿ ಮೌಲ್ಯದ ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ವಿವಾದಗಳನ್ನು ಶೀಘ್ರವಾಗಿ ತೀರ್ಮಾನಗೊಳಿಸುವ ಉದ್ದೇಶದಿಂದ 2015 ರಲ್ಲಿ ಕೇಂದ್ರ ಸರಕಾರವು ವಾಣಿಜ್ಯ ನ್ಯಾಯಾಲಯಗಳ ಕಾಯ್ದೆ 2015 ಜಾರಿಮಾಡಿದೆ. ಇದರ ಪ್ರಕಾರ ಸಿವಿಲ್ ಪ್ರೋಸೀಜರ್ ಕೋಡ್ 1908ರ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡಲಾಗಿರುತ್ತದೆ. ರಾಜ್ಯ ಸರಕಾರವು ಸಂಬಂಧಪಟ್ಟ ಉಚ್ಚ ನ್ಯಾಯಾಲಯ (ಹೈ ಕೋರ್ಟ್) ನೊಂದಿಗೆ ಸಮಾಲೋಚಿಸಿ ವಾಣಿಜ್ಯ ವ್ಯವಹಾರಗಳಿಗೆ ಸಂಬಂದಿಸಿದ ವಿವಿಧ ವಿವಾದಗಳನ್ನು ತೀರ್ಮಾನಿಸಲು ಅಗತ್ಯವುಳ್ಳ ವಾಣಿಜ್ಯ ನ್ಯಾಯಾಲಯಗಳನ್ನು ರಚಿಸಿ ಸೂಕ್ತ ಅಧಿಕಾರವನ್ನು ನೀಡಲಾಗಿರುತ್ತದೆ. ಈ ರೀತಿಯಾಗಿ ರಚನೆಯಾಗಿರುವ ಜಿಲ್ಲಾ ವಾಣಿಜ್ಯ ನ್ಯಾಯಾಲಯಗಳು ಈ ಕೆಳ ಕಾಣಿಸಿದ ವಿವಿಧ ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಪಟ್ಟ ವಿವಾದವನ್ನು ವಿಚಾರಿಸಿ ತೀರ್ಮಾನಿಸುವ ಕಾನೂನುಬದ್ಧ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತದೆ.
ಅವುಗಳು ಯಾವುದೆಂದರೆ
ವ್ಯಾಪಾರಿಗಳು, ಬ್ಯಾಂಕರ್ಗಳು, ಲೇವಾದೇವಿದಾರರು (ಫೈನಾನ್ಸರ್) ಮತ್ತು ವ್ಯಾಪಾರಿಗಳ ಸಾಮಾನ್ಯ ವ್ಯವಹಾರಗಳು, ಅಂತಹ ದಾಖಲೆಗಳ ಜಾರಿ ಮತ್ತು ವ್ಯಾಖ್ಯಾನ ಸೇರಿದಂತೆ ಮರ್ಕೆಂಟೈಲ್ ದಾಖಲೆಗಳಿಗೆ ಸಂಬಂಧಪಟ್ಟವುಗಳು. ಯಾವುದೇ ಸರಕು ಅಥವಾ ಸಾಮಾಗ್ರಿಗಳ ರಫ್ತು ಅಥವಾ ಆಮದು ಸೇವೆ, ಅಡ್ಮಿರಾಲ್ಟಿ ಮತ್ತು ಕಡಲ (ಸಮುದ್ರದ) ಕಾನೂನಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳು, ವಿಮಾನ, ವಿಮಾನದ ಇಂಜಿನ್ಗಳು, ವಿಮಾನ ಉಪಕರಣಗಳು ಮತ್ತು ಹೆಲಿಕಾಪ್ಟರ್ಗಳಿಗೆ ಸಂಬಂಧಿಸಿದ ವಿವಿಧ ರೀತಿಯ ವಹಿವಾಟುಗಳು, ಅಂದರೆ, ಅವುಗಳ ಮಾರಾಟ, ಗುತ್ತಿಗೆ ಮತ್ತು ಹಣಕಾಸು ವಿಚಾರ, ಸರಕುಗಳ ಸಾಗಣೆ, ಟೆಂಡರನ್ನು ಒಳಗೊಂಡಂತೆ ನಿರ್ಮಾಣ ಮತ್ತು ಮೂಲಸೌಕರ್ಯ ಒಪ್ಪಂದ, ವ್ಯಾಪಾರ ಅಥವಾ ವಾಣಿಜ್ಯದಲ್ಲಿ ಪ್ರತ್ಯೇಕವಾಗಿ ಬಳಸಲಾಗುವ ಸ್ಥಿರ ಆಸ್ತಿಗೆ ಸಂಬಂಧಿಸಿದ ಒಪ್ಪಂದ, ಫ್ರ್ಯಾಂಚೈಸಿಂಗ್ ಒಪ್ಪಂದ, ವಿತರಣೆ ಮತ್ತು ಪರವಾನಗಿ ಒಪ್ಪಂದ, ನಿರ್ವಹಣೆ ಮತ್ತು ಸಲಹಾ ಒಪ್ಪಂದ, ಜಂಟಿ ಉದ್ಯಮ ಒಪ್ಪಂದ, ಷೇರುದಾರರ ಒಪ್ಪಂದ, ಹೊರಗುತ್ತಿಗೆ ಸೇವೆಗಳು ಮತ್ತು ಹಣಕಾಸು ಸೇವೆಗಳು ಸೇರಿದಂತೆ ಸೇವಾ ಉದ್ಯಮಕ್ಕೆ ಸಂಬಂಧಿಸಿದ ಚಂದಾದಾರಿಕೆ ಮತ್ತು ಹೂಡಿಕೆ ಒಪ್ಪಂದ, ಮರ್ಕೆಂಟೈಲ್ ಏಜೆನ್ಸಿ ಮತ್ತು ಮರ್ಕೆಂಟೈಲ್ ಬಳಕೆ, ಪಾಲುದಾರಿಕೆ ಒಪ್ಪಂದ, ತಂತ್ರಜ್ಞಾನ ಅಭಿವೃದ್ಧಿ ಒಪ್ಪಂದ, ನೋಂದಾಯಿತ ಮತ್ತು ನೋಂದಾಯಿಸದ ಟ್ರೇಡ್ಮಾಕ್ರ್ಗಳು, ಹಕ್ಕುಸ್ವಾಮ್ಯ, ಪೇಟೆಂಟ್, ವಿನ್ಯಾಸ, ಡೊಮೇನ್ ಹೆಸರುಗಳು, ಭೌಗೋಳಿಕ ಸೂಚನೆಗಳು ಮತ್ತು ಸೆಮಿಕಂಡಕ್ಟರ್ ಇಂಟಿಗ್ರೇಟೆಡ್ ಸರ್ಕ್ಯೂಟ್ಗಳಿಗೆ ಸಂಬಂಧಿಸಿದ ಬೌದ್ಧಿಕ ಆಸ್ತಿ ಹಕ್ಕುಗಳು.
ಸರಕುಗಳ ಮಾರಾಟ ಅಥವಾ ಸೇವೆಗಳನ್ನು ಒದಗಿಸುವ ಒಪ್ಪಂದ

ತೈಲ ಮತ್ತು ಅನಿಲ ನಿಕ್ಷೇಪಗಳು ಅಥವಾ ವಿದ್ಯುತ್ಕಾಂತೀಯ ಸ್ಪೆಕ್ಟ್ರಮ್ ಸೇರಿದಂತೆ ಇತರ ನೈಸರ್ಗಿಕ ಸಂಪನ್ಮೂಲಗಳ ಶೋಷಣೆ, ವಿಮೆ ಮತ್ತು ಮರು-ವಿಮೆ, ಮೇಲ್ಕಾಣಿಸಿದ ವಿಷಯಗಳಿಗೆ ಸಂಬಂಧಿಸಿದ ಏಜೆನ್ಸಿಯ ಒಪ್ಪಂದಗಳು, ಕೇಂದ್ರ ಸರ್ಕಾರವು ಸೂಚಿಸಬಹುದಾದ ಇತರ ವಾಣಿಜ್ಯ ವಿವಾದಗಳು. ಈ ಮೇಲ್ಕಾಣಿಸಿದ ವಾಣಿಜ್ಯ ವಿವಾದಗಳಿಗೆ ಸಂಬಂಧಪಟ್ಟಂತೆ ಈ ಹಿಂದೆ ಸಿವಿಲ್ ನ್ಯಾಯಾಲಯವು ಹೊಂದಿದ್ದ ಅಧಿಕಾರವನ್ನು ಈ ಮೇಲ್ಕಾಣಿಸಿದ ಕಾನೂನು ಅಂದರೆ ವಾಣಿಜ್ಯ ನ್ಯಾಯಾಲಯಗಳ ಕಾಯಿದೆ 2015 ನಿಷೇಧಿಸಿದೆ. ಈ ಪ್ರಕಾರ ಮೇಲ್ಕಾಣಿಸಿದ ಕಾನೂನು ಜಾರಿಗೆ ಬಂದ ದಿನಾಂಕ ಅಥವಾ ಆ ನಂತರ ಸಿವಿಲ್ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಮೂರು ಲಕ್ಷಕ್ಕಿಂತ ಜಾಸ್ತಿ ಮೌಲ್ಯದ ವಾಣಿಜ್ಯ ವ್ಯವಹಾರದ ವಿವಾದಕ್ಕೆ ಸಂಬಂಧಪಟ್ಟ ದಾವೆಯನ್ನು ಸಂಬಂಧಪಟ್ಟ ವಾಣಿಜ್ಯ ನ್ಯಾಯಾಲಯಕ್ಕೆ ವರ್ಗಾಯಿಸಬೇಕಾಗುತ್ತದೆ.











































