ವಿಜ್ಞಾನಿಗಳಿಂದ ರೋಗಬಾಧೆ ನಿವಾರಣೆ ಕುರಿತು ಮಾಹಿತಿ
ಹೆಬ್ರಿ : ತೋಟಗಾರಿಕೆ ರೈತ ಉತ್ಪಾದನಾ ಸಂಸ್ಥೆ ನಿಯಮಿತ ಹೆಬ್ರಿ ಮತ್ತು ಕೃಷಿ-ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಸಂಯುಕ್ತ ಆಶ್ರಯದಲ್ಲಿ ʼಅಡಕೆ ಬೆಳೆ ಬೇರುಹುಳ ನಿರ್ವಹಣಾ ತರಬೇತಿʼ ಕಾರ್ಯಕ್ರಮ ಶಿವಪುರ ಗ್ರಾಮದ ಪ್ರಗತಿಪರ ಕೃಷಿಕ ಮಾರ್ಮಕ್ಕಿ ಪುಟ್ಟಣ್ಣ ಭಟ್ ಇವರ ತೋಟದಲ್ಲಿ ನಡೆಯಿತು.
ಶಿವಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡು ಇದರ ಹಿರಿಯ ವಿಜ್ಞಾನಿ ಡಾ. ರಾಜ್‌ಕುಮಾರ್ ಮುಖ್ಯ ತರಬೇತುದಾರರಾಗಿ ಭಾಗವಹಿಸಿ ಅಡಕೆ ಬೆಳೆಗೆ ಬಾಧಿಸುವ ಬೇರುಹುಳುಗಳನ್ನು ಜೈವಿಕ ಮಾದರಿಯಲ್ಲಿ ನಿಯಂತ್ರಿಸಲು ಅನುಸರಿಸಬೇಕಾದ ಪ್ರಾಯೋಗಿಕ ಯಶಸ್ಸು ಕಂಡಿರುವ ಫಲಿತಾಂಶ ಆಧಾರಿತ ವಿನೂತನ ಜೀವಾಣು ಪ್ರಯೋಗದ ವಿಧಾನ ಕುರಿತು ಸವಿಸ್ತಾರವಾಗಿ ಅಡಕೆ ಬೆಳೆಗಾರರಿಗೆ ತರಬೇತಿ ನೀಡಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಧನಂಜಯ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಗತಿಪರ ಕೃಷಿಕ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ಮಾತನಾಡಿ, ಅಕಾಲಿಕ ಮಳೆ, ಅತಿ ಬಿಸಿಲು ಇತ್ಯಾದಿ ಪ್ರಾಕೃತಿಕ ಏರಿಳಿತಗಳ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಅಡಕೆ ಬೆಳೆಗೆ ರೋಗಕಾರಕವಾದ ಕ್ರಿಮಿಕೀಟಗಳು ಮಣ್ಣಿನಲ್ಲಿ ವಿಪರೀತವಾಗಿ ವೃದ್ಧಿಸುತ್ತಿವೆ. ಕೃಷಿ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ತೋಟವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಮೂಲಕ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದರು. ಹೆಬ್ರಿ ತೋಟಗಾರಿಕೆ ರೈತ ಉತ್ಪಾದನಾ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ಆಚಾರ್ಯ ಉಪಸ್ಥಿತರಿದ್ದರು. ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿರುವ ಪೂರಕ ಜೀವಾಣುಗಳನ್ನು ಅಡಕೆ ಕೃಷಿಕರಿಗೆ ಉಚಿತವಾಗಿ ವಿತರಿಸಲಾಯಿತು. ಹರೀಶ್ ಶಿವಪುರ ಸ್ವಾಗತಿಸಿ, ಪುಟ್ಟಣ್ಣ ಭಟ್ ವಂದನಾರ್ಪಣೆ ಮಾಡಿದರು.











































