ಕಾಂಗ್ರೆಸ್‌ನಿಂದ ಪರಶುರಾಮ ಥೀಂ ಪಾರ್ಕ್‌ ಬಗ್ಗೆ ಅಪಪ್ರಚಾರ : ಸುನಿಲ್‌ ಹೆಗ್ಡೆ ತಿರುಗೇಟು

ಅಭಿವೃದ್ಧಿ ಸಹಿಸದ ಕಾಂಗ್ರೆಸ್‌ನ ನೀಚ ಮನಸ್ಥಿತಿ ಪ್ರದರ್ಶನ

ಕಾರ್ಕಳ: ತಾಲೂಕಿನ ಬೈಲೂರು ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನವರಿ 2023ರಲ್ಲಿ ಸ್ಥಾಪಿತವಾದ ಪರಶುರಾಮ ಥೀಂ ಪಾರ್ಕ್‌ ಕಡಿಮೆ ಅವಧಿಯಲ್ಲಿ ವಿಶ್ವವಿಖ್ಯಾತಿ ಗಳಿಸಿಕೊಂಡಿದೆ. ಇದನ್ನು ಸಹಿಸಲಾಗದೆ ಚಡಪಡಿಸುತ್ತಿರುವ ಕಾಂಗ್ರೆಸ್‌ ಹೇಗಾದರೂ ಮಾಡಿ ಕಾರ್ಕಳದ ಖ್ಯಾತಿಗೆ ಮಸಿ ಬಳಿಯಲು ಅಪಪ್ರಚಾರದಲ್ಲಿ ತೊಡಗಿಕೊಂಡಿದೆ. ತಮ್ಮ ಸರಕಾರ ಇದೆ ಎಂಬ ಕಾರಣಕ್ಕೆ ಏನು ಬೇಕಾದರೂ ಮಾಡಬಹುದು ಎಂಬ ದುರಹಂಕಾರ ಕಾಂಗ್ರೆಸ್‌ ನಾಯಕರಿಗೆ ಬಂದಿದೆ ಎಂಬುದಾಗಿ ಯರ್ಲಪಾಡಿ ಪಂಚಾಯತ್‌ ಉಪಾಧ್ಯಕ್ಷ ಸುನಿಲ್‌ ಹೆಗ್ಡೆ ಹೇಳಿದ್ದಾರೆ.

ಪರಶುರಾಮ ಥೀಂ ಪಾರ್ಕ್ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಿಜೆಪಿ ಸರಕಾರ ನೀಡಿದ ಮಹತ್ವದ ಕೊಡುಗೆ. ಕಾರ್ಕಳದ ಬೈಲೂರು ಯರ್ಲಪಾಡಿ ಎಂಬ ಗ್ರಾಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಕಾರಣವಾದ ಇದು ನಿರ್ಮಾಣವಾದ ಜಾಗದ ಬಗ್ಗೆ ಪ್ರಶ್ನೆ ಎತ್ತಿರುವುದು ಸೋಲಿನ ಹತಾಶೆಯಲ್ಲಿರುವ ಕಾರ್ಕಳದ ಕಾಂಗ್ರೆಸ್‌ ನಾಯಕರ ನೀಚ ಮನಸ್ಥಿತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಅಭಿವೃದ್ಧಿ ವಿರೋಧಿ ಎಂಬುದು ಪದೇ ಪದೆ ಸ್ಪಷ್ಟವಾಗುತ್ತದೆ ಎಂದು ಸುನಿಲ್ ಹೆಗ್ಡೆ ಹೇಳಿದ್ದಾರೆ.

ಗೋಮಾಳ ಜಾಗವಾಗಿದ್ದರೂ ಸಂಪೂರ್ಣ ಬಂಡೆಗಳಿಂದ ಕೂಡಿದ ಹಾಗೂ ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವ ಈ ಪ್ರದೇಶವು ಜಾನುವಾರುಗಳಿಗೆ ಉಪಯುಕ್ತವಲ್ಲ ಎಂಬುದು ಒಂದನೇ ಕ್ಲಾಸಿನ ಮಗುವಿಗೂ ತಿಳಿದಿರುವ ವಿಚಾರ. ಅದು ಕಾರ್ಕಳದ ಕಾಂಗ್ರೆಸ್‌ನವರಿಗೆ ತಿಳಿಯದಿರುವುದು ಅವರ ಅಜ್ಞಾನದ ಪ್ರದರ್ಶನವಷ್ಟೇ. ಸಾಧ್ಯವಾದರೆ ಬೇರೆ ಉಪಯುಕ್ತ ಜಾಗವನ್ನು ಗೋಮಾಳವಾಗಿ ಕಾಯ್ದಿರಿಸಿ ಪ್ರವಾಸೋದ್ಯಮ ಇಲಾಖೆಗೆ ಈ ಜಾಗವನ್ನು ಮಂಜೂರು ಮಾಡುವುದರ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ಯರ್ಲಪಾಡಿ ಗ್ರಾಮದ ಆರ್ಥಿಕ ಅಭಿವೃದ್ಧಿಗೆ ಸಹಕರಿಸಿದಂತಾಗುತ್ತದೆ. ಈ ಬಗ್ಗೆ ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಮನವಿ ಮಾಡುವುದನ್ನು ಬಿಟ್ಟು, ಕಾರ್ಕಳ ಕಾಂಗ್ರೆಸ್ ನಾಯಕರು ಅಭಿವೃದ್ಧಿ ವಿರೋಧಿ ಹೇಳಿಕೆ ನೀಡುತ್ತಿರುವುದು ಬಹಳ ಬೇಸರದ ಸಂಗತಿ ಎಂದಿದ್ದಾರೆ.



















































































error: Content is protected !!
Scroll to Top