ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಮುಂದುವರಿದ ಮಳೆಯಬ್ಬರ – ವಿವಿಧೆಡೆ ಅವಾಂತರ

ಮುಂಡ್ಲಿ ನೆರೆನೀರಿಗೆ ಮನೆ ಜಲಾವೃತ – ಅಪಾರ ಹಾನಿ – ನಗರದ ರಸ್ತೆಯಲ್ಲೇ ಹರಿಯುತ್ತಿದೆ ನೀರು

ಕಾರ್ಕಳ : ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಪರಿಣಾಮ ಹಲವೆಡೆ ಹಾನಿ ಸಂಭವಿಸಿದೆ. ಶನಿವಾರದಿಂದ ಆದಿತ್ಯವಾರದವೆರೆಗೆ ಎಡೆಬಿಡದೇ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಹಲವೆಡೆ ಅವಾಂತರ ಸೃಷ್ಟಿಸಿದೆ.

ಮುಂಡ್ಲಿ ಜಲಾಶಯ ಉಕ್ಕಿ ಹರಿಯುತ್ತಿದೆ. ಇಲ್ಲಿನ ತೋಟ ನೆರೆ ನೀರಿನಿಂದ ಆವೃತ್ತವಾಗಿದೆ. ಅಡಿಕೆ, ತೆಂಗು ತೋಟ, ಗದ್ದೆಗಳಲ್ಲಿ ನೀರು ತುಂಬಿದೆ. ಭಾಸ್ಕರ್‌ ಆಚಾರ್‌ ಎಂಬವರ ಮನೆ ಜಲಾವೃತವಾಗಿದೆ. ಆ ಮನೆಯಲ್ಲಿ 9 ಮಂದಿ ವಾಸವಿದ್ದು ಅವರಲ್ಲಿ ಇಬ್ಬರು ಜ್ವರದಿಂದ ಬಳಲುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. 7 ಮನೆಗಳಿಗೆ ನೀರು ನುಗ್ಗಿ ಮನೆ ಮಂದಿಯಲ್ಲಿ ಆತಂಕವುಂಟು ಮಾಡಿದೆ. ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ಮೂರು ಮನೆಗಳಿಗೆ ನೀರು ನುಗ್ಗಿದೆ.

ತಹಶೀಲ್ದಾರ್‌ ಭೇಟಿ
ಜಿವಿಆರ್‌ ಇನ್‌ಫ್ರಪ್ರಾಜೆಕ್ಟ್‌ ಕಂಪನಿಯವರು ಜಲಾಶಯದ ಗೇಟ್‌ ತೆರವುಗೊಳಿಸಿಲ್ಲ ಎಂಬ ಸ್ಥಳೀಯರ ದೂರಿನ ಮೇರೆಗೆ ಭಾನುವಾರ ತಹಶೀಲ್ದಾರ್‌ ಅನಂತ ಶಂಕರ್‌ ಸ್ಥಳಕ್ಕೆ ಭೇಟಿ ಕಂಪನಿಯವರಲ್ಲಿ ಗೇಟ್‌ ತೆರವುಗೊಳಿಸುವಂತೆ ಸೂಚಿಸಿದರು. ಈ ವೇಳೆ ಸ್ಥಳೀಯರು ತಹಶೀಲ್ದಾರ್‌ ಅವರಲ್ಲಿ ಜಿವಿಆರ್‌ ಕಂಪನಿಯಿಂದಾಗುವ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಟ್ಟರು.

ಮಳೆ ಪ್ರಮಾಣ
ಕಾರ್ಕಳ – 227.8 ಮಿ.ಮೀ., ಇರ್ವತ್ತೂರು – 197.6 ಮಿ.ಮೀ., ಅಜೆಕಾರು – 250.2 ಮಿ.ಮೀ., ಸಾಣೂರು – 195.8 ಮಿ.ಮೀ., ಕೆದಿಂಜೆ – 193.8 ಮಿ.ಮೀ., ಮುಳಿಕ್ಕಾರು -302.4 ಮಿ.ಮೀ., ಕೆರ್ವಾಶೆ -274.2ಮಿ.ಮೀ. ಮಳೆಯಾಗಿದೆ. ಮುಳಿಕ್ಕಾರು ಭಾಗದಲ್ಲಿ ಗರಿಷ್ಠ ಮಳೆ ಪ್ರಮಾಣ ದಾಖಲಾಗಿದ್ದರೆ, ಕೆದಿಂಜೆ ಪರಿಸರದಲ್ಲಿ ಕನಿಷ್ಠ 193.8 ಮಿ.ಮೀ. ಮಳೆಯಾಗಿದೆ.

ಚರಂಡಿಯಿಲ್ಲ
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಮಳೆ ನೀರು ಚರಂಡಿಯಲ್ಲಿ ಸುಗಮವಾಗಿ ಸಾಗಲು ವ್ಯವಸ್ಥೆ ಕಲ್ಪಿಸದ ಕಾರಣ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಆನೆಕೆರೆ ಸೇರಿದಂತೆ ಪುರಸಭಾ ವ್ಯಾಪ್ತಿಯ ವಿವಿಧೆಡೆ ಚರಂಡಿಯಲ್ಲಿನ ಹೂಳು, ಪೊದೆಗಳನ್ನು ಸಕಾಲದಲ್ಲಿ ತೆರೆವುಗೊಳಿಸದ ಪರಿಣಾಮ ರಸ್ತೆಯೇ ತೋಡಾಗಿ ಪರಿಣಮಿಸಿದೆ. ಕೆಲವಡೆ ಚರಂಡಿಯೇ ಇಲ್ಲದೇ ತೊಂದರೆಯಾಗಿದೆ. ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಈ ರೀತಿಯ ಅವಾಂತರವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಪಾರ ಹಾನಿ
ನಂದಳಿಕೆ ಗ್ರಾಮದ ದೇವಸ್ಥಾನದ ಹತ್ತಿರ ಸುಬ್ರಹ್ಮಣ್ಯ ಭಟ್‌ ಅವರ ಮನೆಗೆ ಮರ ಬಿದ್ದು ಅಂದಾಜು 1 ಲಕ್ಷ ರೂ. ನಷ್ಟವುಂಟಾಗಿದೆ. ಈದು ಗ್ರಾಮದ ಚಂದು ಪೂಜಾರಿ ಅವರ ಮನೆಗೆ ಮರ ಬಿದ್ದು ಸುಮಾರು 25 ಸಾವಿರ ರೂ. ನಷ್ಟವಾಗಿದೆ. ನಂದಳಿಕೆ ಗ್ರಾಮದ ದೇವಸ್ಥಾನದ ಬಳಿ ಶಿವಪ್ರಸಾದ್ ರಾವ್ ಅವರ ತೋಟದಲ್ಲಿ ಅಡಿಕೆ-ತೆಂಗು ನೆಲಕ್ಕುರುಳಿದ 20 ಸಾವಿರ ನಷ್ಟವುಂಟಾಗಿದೆ. ನಗರದ ಕರಿಯಕಲ್ಲು ಗಿರಿಜಾ ಗ್ಯಾರೇಜ್ ಬಳಿ ಮರಬಿದ್ದು ವಿದ್ಯುತ್ ಕಂಬ ಬಿದ್ದು ಮನೆ ಆವರಣ ಗೋಡೆ ಕುಸಿದಿದೆ. ಕಾರ್ಕಳ ಗ್ರಾಮದ ಬನಸಾಲೆ ಬಳಿ ಜಲಜಾ ಶೆಟ್ಟಿ ಅವರ ಮನೆಗೆ ಮರಬಿದ್ದು 50 ಸಾವಿರ ರೂ. ನಷ್ಟವುಂಟಾಗಿದೆ. ಕಾಳಿಕಾಂಬಾ ದೇವಸ್ಥಾನದ ಎದುರುಗಡೆ ವಿದ್ಯುತ್‌ ಕಂಬಕ್ಕೆ ಮರ ಬಿದ್ದು ಮೂರು ಕಂಬ ಧರಾಶಾಯಿಯಾಗಿದೆ. ಪಳ್ಳಿ ಗ್ರಾಮದ ಕೈರುಮನೆ ಎಂಬಲ್ಲಿ ಶಂಕರ್ ಅವರ ವಾಸ್ತವ್ಯದ ಮನೆಗೆ ಮರಬಿದ್ದು ಹಾನಿಯಾಗಿದ್ದು ಅಂದಾಜು 45 ಸಾವಿರ ರೂ. ನಷ್ಟವಾಗಿದೆ. ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿನ ನಿವಾಸಿ ಸೀತಾ ಶೆಟ್ಟಿಯವರ ಮನೆಗೆ ಮಳೆಯಿಂದ ಹಾನಿಯಾಗಿದ್ದು 6 ಸಾವಿರ ರೂ. ನಷ್ಟ ಸಂಭವಿಸಿದೆ.

ಆನೆಕೆರೆ ಗೇಟ್ ಬಳಿಯಿರುವ ಶೆಡ್ ಗೆ ಬೃಹತ್ ಗಾತ್ರದ ಮರ ಬಿದ್ದಿದೆ
ನಂದಳಿಕೆ ಗ್ರಾಮದ ಸುಬ್ರಹ್ಮಣ್ಯ ಭಟ್‌ ಅವರ ಮನೆ ಬಿರುಗಾಳಿಗೆ ಹಾನಿಗೀಡಾಗಿರುವುದು
ಕಾರ್ಕಳ ಕಸಬಾದ ಬಂಡಸಾಲೆ ಜಲಜಾ ಶೆಟ್ಟಿ ಅವರ ಮನೆಗೆ ಹಲಸಿನ ಮರ ಬಿದ್ದು ಅಂದಾಜು 45 ಸಾವಿರ ರೂ. ನಷ್ಟವುಂಟಾಗಿದೆ
ಈದು ಗ್ರಾಮದ ಚಂದ್ರ ಪೂಜಾರಿ ಅವರ ಮನೆಗೆ ಮರ ಬಿದ್ದಿದೆ
ಅನಂತಶಯನ-ದೇಗುಲದ-ಆವರಣ-ಗೋಡೆ-ಕುಸಿದಿದೆ
ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಸೀತಾ ಶೆಟ್ಟಿ ಅವರ ಮನೆ ಹಾನಿಗೀಡಾಗಿರುವುದು
ಧುಮ್ಮುಕ್ಕಿ ಹರಿಯುತ್ತಿರುವ ಮುಂಡ್ಲಿ ಜಲಾಶಯ
ಕಾಳಿಕಾಂಬ ದೇವಸ್ಥಾನ ಮುಂಭಾಗ ಮರ ಬಿದ್ದು ಮೂರು ವಿದ್ಯುತ್‌ ಕಂಬ ಉರುಳಿದೆ


















































































error: Content is protected !!
Scroll to Top