ಮೂಡುಬಿದಿರೆ : ಉತ್ತಮ ನಾಯಕತ್ವದಿಂದ ಉತ್ತಮ ರಾಷ್ಟ್ರ ನಿರ್ಮಾಣವಾಗುತ್ತದೆ. ಒಬ್ಬ ನಾಯಕನಲ್ಲಿ ಶಿಸ್ತು, ಶ್ರದ್ಧೆ, ಕಠಿಣ ಪರಿಶ್ರಮ ಮತ್ತು ತನ್ನ ಜವಬ್ದಾರಿಯ ಅರಿವಿರಬೇಕು. ವಿದ್ಯಾರ್ಥಿ ಜೀವನದಲ್ಲೇ ಇಂತಹ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವಕೀಲ ದಿವಿಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು. ಅವರು ಜು. 21 ರಂದು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಿ ಮಾತನಾಡಿ, ಶಾಲಾ ಸಂಸತ್ತಿನಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಯುತ್ತದೆ. ಉತ್ತಮ ನಾಗರೀಕನಾಗಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ಜೀವನದಲ್ಲಿ ಬರುವ ಕಷ್ಟಗಳನ್ನು ಮೆಟ್ಟಿ ನಿಲ್ಲುವುದೇ ನಾಯಕನ ನಿಜವಾದ ಲಕ್ಷಣ. ಆಡಳಿತ ಸಕ್ಕರೆಯಂತೆ ಸಿಹಿಯಾಗಿರಬೇಕು. ಅಂತಹ ಉತ್ತಮ ನಾಯಕರು ನೀವಾಗಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ನಾಯಕನಾದವನು ಹೊಂದಬೇಕು. ಎಲ್ಲದಕ್ಕೂ ಮುಖ್ಯವಾಗಿ ಮನುಷ್ಯನಿಗೆ ಮಾನವೀಯತೆ ಮುಖ್ಯ. ಈ ನಿಟ್ಟಿನಲ್ಲಿ ಸಂಸ್ಥೆಯ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಿಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ, ಉತ್ತಮ ನಾಯಕರಾಗಿ ಎಂದು ಸಂಸತ್ತಿನ ನೂತನ ನಾಯಕರುಗಳಿಗೆ ಶುಭ ಹಾರೈಸಿದರು.
ಶಾಲಾ ಸಂಸತ್ತಿನ ನಾಯಕ ನೀರಜ್, ವಿರೋಧ ಪಕ್ಷದ ನಾಯಕಿ ಶ್ಯಾಮಿಲಿ ಹೆಗ್ದೆ ಹಾಗೂ ಚುನಾಯಿತರಾದ ನಾಯಕರುಗಳಿಗೆ ಸಂಸ್ಥೆಯ ಪದನಾಮ ಹಾಗೂ ಜವಾಬ್ದಾರಿಗಳನ್ನು ಮುಖ್ಯ ಅತಿಥಿ ದಿವಿಜೇಂದ್ರ ಕುಮಾರ್ ಹಂಚಿಕೆ ಮಾಡಿದರು. ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಪ್ರತಿಜ್ಞಾ ವಿಧಿ ಬೋಧಿಸಿದರು. ಸಹ ಮುಖ್ಯೋಪಾಧ್ಯಾಯ ಜಯಶೀಲ ನಾಯಕರುಗಳ ಜವಾಬ್ದಾರಿಗಳನ್ನು ವಾಚಿಸಿದರು. ವಿದ್ಯಾರ್ಥಿ ಆದಿತ್ಯ ಕಾರ್ಯಕ್ರಮವನ್ನು ನಿರೂಪಿಸಿದರು.



































